ಶುಲ್ಕ ವಿವರ ಪ್ರಕಟಿಸದ ಶಾಲೆಗಳ ವಿರುದ್ಧ ಕ್ರಮಕ್ಕೆ ಶಿಕ್ಷಣ ಇಲಾಖೆ ಸೂಚನೆ

Update: 2020-08-25 14:49 GMT

ಬೆಂಗಳೂರು, ಆ.25: ಶುಲ್ಕದ ವಿವರ ಪ್ರಕಟಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ(ಬಿಇಒ) ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಖಾಸಗಿ ಶಾಲೆಗಳು 2020-21 ನೇ ಸಾಲಿಗೆ ಪಡೆಯುವ ಶುಲ್ಕದ ವಿವರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು ಎಂದು ಈ ಹಿಂದೆ ಸೂಚಿಸಲಾಗಿದೆ. ಆದರೂ, ಬಹುತೇಕ ಶಾಲೆಗಳು ಪ್ರಕಟಿಸಿಲ್ಲ. ಸರಕಾರದ ಆದೇಶ ಹಾಗೂ ಆಯುಕ್ತಾಲಯದ ನಿರ್ದೇಶನ ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಇಲಾಖೆ ತಿಳಿಸಿದೆ.

ಆಯಾ ಜಿಲ್ಲಾ ಉಪ ನಿರ್ದೇಶಕರು ಮೇಲ್ವಿಚಾರಣೆ ನಡೆಸಿ ಎಲ್ಲ ಅನುದಾನ ರಹಿತ ಶಾಲೆಗಳ ಶುಲ್ಕದ ವಿವರವನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು. ಸೆ.30 ರೊಳಗೆ ಇಲಾಖೆಯ ತಂತ್ರಾಂಶದಲ್ಲಿ ಶುಲ್ಕದ ವಿವರ ಪ್ರಕಟಿಸದ ಶಾಲೆಗಳ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ಸ್ವಯಂ ದೂರು ದಾಖಲಿಸಿ ವರದಿಯನ್ನು ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಕೆಲವು ಶಾಲಾಡಳಿತಗಳು ನ್ಯಾಯಾಲಯದಲ್ಲಿ ದಾವೆ ಹೂಡಿ, ಮಧ್ಯಂತರ ಆದೇಶ ಪಡೆದಿವೆ. ಅಂಥ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಹಾಗೂ ದಾವೆ ಇತ್ಯರ್ಥಕ್ಕೆ ಉಪನಿರ್ದೇಶಕರು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News