ತಂತ್ರಜ್ಞಾನದಿಂದ ದೊರಕಬಹುದೇ ನ್ಯಾಯ?

Update: 2020-08-26 04:56 GMT

2020ರ ರಾಷ್ಟ್ರೀಯ ಶಿಕ್ಷಣ ನೀತಿ ಈಗ ಅಸ್ತಿತ್ವದಲ್ಲಿರುವ ಉನ್ನತ ಶಿಕ್ಷಣ ವ್ಯವಸ್ಥೆಗಳನ್ನು ಪುನರ್ ರೂಪಿಸುವ ಉದ್ದೇಶ ಹೊಂದಿದೆ. ಬೋಧನೆ-ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಈ ಶಿಕ್ಷಣ ನೀತಿಯ ಒಂದು ಮುಖ್ಯ ಗುರಿಯಾಗಿದೆ. ಅದೇನಿದ್ದರೂ ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸಿ, ಅದು ಎಲ್ಲರಿಗೂ ಸಿಗುವಂತೆ ಮಾಡಿ ತಂತ್ರಜ್ಞಾನ ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವಂತೆ ಅದು ಸಾಂಸ್ಥೀಕರಿಸಲ್ಪಟ್ಟಾಗ ಮಾತ್ರ ಹೊಸ ತಂತ್ರಜ್ಞಾನ ಒದಗಿಸುವ ಅವಕಾಶಗಳು ಉನ್ನತ ಶಿಕ್ಷಣದಲ್ಲಿ ಸರ್ವ ಸಮಾನತೆಯನ್ನು ಸಾಧಿಸಬಹುದು

ಎಲ್ಲರನ್ನೂ ಒಳಗೊಳ್ಳುವಂತಹ ಕಲಿಕೆ ಸಾಧ್ಯವಾಗಬೇಕಾದರೆ ಸಮಕಾಲೀನ ಕ್ಯಾಂಪಸ್ ಗಳಲ್ಲಿರುವ ವಿದ್ಯಾರ್ಥಿ ವೈವಿಧ್ಯದ ಆಳವಾದ ತಿಳಿವಳಿಕೆ ಅವಶ್ಯಕ. ಇವತ್ತಿನ ಸಂದರ್ಭದಲ್ಲಿ ಗಣನೀಯ ಸಂಖ್ಯೆಯ ವಿದ್ಯಾರ್ಥಿಗಳು ಎಸ್ಸಿ, ಎಸ್ಟಿ ಮತ್ತು ಒಬಿಸಿ ಯಂತಹ ಸಮಾಜದ ಕೆಳಹಂತಗಳಿಂದ ಬಂದ ವಿದ್ಯಾರ್ಥಿಗಳಾಗಿದ್ದಾರೆ. ಅವರಲ್ಲಿ ಎಷ್ಟೋ ಮಂದಿ ಬಡ ಕುಟುಂಬಗಳಿಂದ ಹಾಗೂ ಮಾಧ್ಯಮಿಕ ಶಿಕ್ಷಣೋತ್ತರ ಶಿಕ್ಷಣವನ್ನು ಪಡೆದಿರುವ ಒಬ್ಬನೇ ಒಬ್ಬ ಕೂಡ ಇರದ ಮನೆಗಳಿಂದ ಬರುವವರು. ಇವರಲ್ಲಿ ಸರಕಾರಿ ಶಾಲೆಗಳು, ಹಿಂದುಳಿದ ಪ್ರದೇಶಗಳು, ತೀರ ದೂರದ ಹಳ್ಳಿಗಾಡಿನವರು ಹಾಗೂ ನಗರಗಳ ಹೊರ ಅಂಚಿನಿಂದ ಬಂದವರು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವರು ಶಾಲೆಗಳಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಕಲಿತಿರುವ ಸಾಧ್ಯತೆಯೇ ಹೆಚ್ಚು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನಲ್ ಪ್ಲಾನಿಂಗ್ ಆ್ಯಂಡ್ ಅಡ್ಮಿನಿಸ್ಪ್ರೇಷನ್ (ಎನ್‌ಐಇಪಿಎ) 2016ರಲ್ಲಿ ನಡೆಸಿದ ಒಂದು ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ ಸಮಾಜದ ಅಂಚಿನಿಂದ ಬರುವ ವಿದ್ಯಾರ್ಥಿಗಳು ಸಾಮಾಜಿಕ ಹೊರಗಿಡುವಿಕೆ (ಎಕ್ಸ್ ಕ್ಲೂಶನ್) ಹಾಗೂ ಶೈಕ್ಷಣಿಕ ಏಕತೆಯ, ಭಾವೈಕ್ಯದ ಕೊರತೆಯಿಂದಾಗಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಂತ್ರಜ್ಞಾನದ ಮೂಲಕ ನಡೆಯುವ ಕಲಿಕೆ ಬಹುತೇಕ ಸಂದರ್ಭಗಳಲ್ಲಿ ಶಿಕ್ಷಕರಿಂದ ನಿರ್ಧರಿತವಾಗಿರುವುದಿಲ್ಲ. ಒಂದು ನಿಗದಿತ ಅವಧಿಯಲ್ಲಿ ಎಷ್ಟನ್ನು ಕಲಿಯಬೇಕೆಂದು ವಿದ್ಯಾರ್ಥಿಗಳೇ ನಿರ್ಧರಿಸಬಲ್ಲರು. ಹೀಗೆ, ಹೊಸ ತಂತ್ರಜ್ಞಾನವನ್ನು ಆಧರಿಸಿ ಬೋಧನೆ-ಕಲಿಕೆ ಅನುಷ್ಠಾನಗೊಂಡಾಗ ಶಿಕ್ಷಣದ ಮೇಲೆ ಈಗ ಇರುವ ದೇಶ ಮತ್ತು ಕಾಲದ ಕಟ್ಟುಪಾಡುಗಳು, ಮಿತಿಗಳು ಅದೃಶ್ಯವಾಗುತ್ತವೆ. ಈ ರೀತಿಯಾದ ಸ್ವ-ಕಾಲ ನಿರ್ಧರಿತ ಹಾಗೂ ವಿದ್ಯಾರ್ಥಿ ಕೇಂದ್ರಿತವಾದ ಕಲಿಕೆಯ ವಿಶೇಷವಾದ, ತುಸು ವಿಚಿತ್ರವಾದ ಅಂಶವು ಸಮಾಜದ ಅಂಚಿನಿಂದ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ ಅವಕಾಶ ನೀಡಬಲ್ಲುದು ಮತ್ತು ಶಿಕ್ಷಕರಿಗೆ ಓರ್ವ ಮಾರ್ಗದರ್ಶಿ, ಸಹಾಯಕ, ಫೆಸಿಲಿಟೇಟರ್ ಆಗುವ ಒಂದು ಹೊಸ ಪಾತ್ರವನ್ನು ನಿರ್ವಹಿಸಲು ನೆರವಾಗಬಲ್ಲುದು.

ಯಾಕೆಂದರೆ ಲಾಕ್‌ಡೌನ್ ಘೋಷಣೆಯಾದಂದಿನಿಂದ, ಉನ್ನತ ಶಿಕ್ಷಣದಲ್ಲಿ ಈ ದೇಶದಲ್ಲಿ 37 ಮಿಲಿಯ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹಾಗೂ ವಿಶ್ವವಿದ್ಯಾನಿಲಯಗಳಿಗೆ ಹಾಜರಾಗಿಲ್ಲ. ಸಂಸ್ಥೆಗಳನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಚ್ಚಬೇಕಾಗಿ ಬಂದಿದ್ದರಿಂದ ದೇಶದ ಉನ್ನತ ಶಿಕ್ಷಣ ಆಡಳಿತಗಾರರು ದೂರ ಕಲಿಕೆಗೆ, ದೂರ ಶಿಕ್ಷಣಕ್ಕಿರುವ ವಿವಿಧ ಸಾಧ್ಯತೆಗಳನ್ನು ಹುಡುಕಬೇಕಾಯಿತು. ಎನ್‌ಐಇಪಿಎಯಲ್ಲಿ ನಡೆಸಿದ ರಾಷ್ಟ್ರಮಟ್ಟದ ಒಂದು ಅಧ್ಯಯನದ ಪ್ರಕಾರ ತಂತ್ರಜ್ಞಾನ ಆಧಾರಿತ ಕಲಿಕೆ ಎಲ್ಲ ಸ್ತರಗಳ ವಿದ್ಯಾರ್ಥಿಗಳನ್ನು ಒಳಗೊಳ್ಳಬೇಕಾದರೆ ನಾವು ಬಹಳ ದೂರದ ದಾರಿ ಸಾಗಬೇಕಾಗಿದೆ. ಅಷ್ಟೇ ಅಲ್ಲ, ಆನ್‌ಲೈನ್ ತರಗತಿಗಳನ್ನು ನಡೆಸುವುದರಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವೆ ಭಾರೀ ಅಂತರವಿದೆ, ತಾರತಮ್ಯವಿದೆ, ಆಘಾತಕಾರಿ ಎನ್ನಬಹುದಾದಷ್ಟು ಅಸಮಾನತೆ ಇದೆ ಎಂಬುದು ಕೂಡ ಆ ಅಧ್ಯಯನದಿಂದ ತಿಳಿದು ಬಂತು.

ಡಿಜಿಟಲ್ ಆಗಿ ಬಲಗೊಳ್ಳುವ ಸಮಾಜದ ಹಾಗೂ ಜ್ಞಾನ ಅರ್ಥ ವ್ಯವಸ್ಥೆಯ ದಿಕ್ಕಿನಲ್ಲಿ ದೇಶವು ಕೈಗೊಂಡಿರುವ ಬದಲಾವಣೆಯ ಮಾರ್ಗದಲ್ಲಿ ಸಾಗುವ ವೇಳೆ ಶಿಕ್ಷಣ ಮತ್ತು ತಂತ್ರಜ್ಞಾನದ ನಡುವೆ ಇರುವ ಕೊಂಡಿಯ ಮಹತ್ವವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಒತ್ತಿ ಹೇಳಿದೆ.

ಹೀಗಾಗಿ, ಅದು ತಂತ್ರಜ್ಞಾನಕ್ಕೆ ನೀಡಿರುವ ಒತ್ತು, ಮಹತ್ವ ಸ್ವಾಗತಾರ್ಹ. ಆದರೆ ಶೈಕ್ಷಣಿಕ ಸನ್ನಿವೇಶಗಳಲ್ಲಿ, ಚೌಕಟ್ಟುಗಳಲ್ಲಿ ತಂತ್ರಜ್ಞಾನವನ್ನು ಯಾವ ಸಂದರ್ಭದಲ್ಲಿ ಹಾಗೂ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎನ್ನುವುದು ಕೂಡ ಬಹಳ ಮುಖ್ಯವಾಗುತ್ತದೆ. ಶೈಕ್ಷಣಿಕ ಸಮಗ್ರತೆ, ಶೈಕ್ಷಣಿಕ ಭಾವೈಕ್ಯ ನಮ್ಮ ದೇಶಕ್ಕೆ ಇನ್ನೂ ಕೂಡ ಒಂದು ಸವಾಲಾಗಿ ಉಳಿದಿರುವಾಗ ತಂತ್ರಜ್ಞಾನವನ್ನು ಹೆಚ್ಚುವರಿ ಕಲಿಕಾ ಸಾಮಗ್ರಿಯನ್ನು ಒದಗಿಸಲಿರುವ ಒಂದು ಮಾರ್ಗವೆಂದು, ಮಾಧ್ಯಮವೆಂದು ಪರಿಗಣಿಸಬೇಕಾಗಿದೆ. ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳು ಇದನ್ನು ಮರೆಯದೆ ತಂತ್ರಜ್ಞಾನದ ಚೌಕಟ್ಟಿನ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ. ಉನ್ನತ ಶಿಕ್ಷಣದ ಮೂಲ ಚೌಕಟ್ಟು ಹಾಗೂ ಪ್ರಕ್ರಿಯೆಯಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಇಂಗ್ಲಿಷ್ ಮೌಲ್ಯಗಳನ್ನು ಬೆಂಬಲಿಸುವ ಹಾಗೂ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕಾಗಿದೆ.

(ಲೇಖಕರು ದಿಲ್ಲಿಯ ಎನ್‌ಐಇಪಿಎಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ.)

ಕೃಪೆ: thehindu

Writer - ಮಲಿಶ್ ಸಿ.ಎಂ.

contributor

Editor - ಮಲಿಶ್ ಸಿ.ಎಂ.

contributor

Similar News