ಕನ್ನಡಪರ ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಿದ್ದನಗೌಡ ಪಾಟೀಲ್ ನಿಧನ

Update: 2020-08-26 10:12 GMT

ಬೆಳಗಾವಿ : ಜಿಲ್ಲೆಯ ಕನ್ನಡಪರ ಹೋರಾಟಗಾರರು, ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಬೆಳಗಾವಿಯ ಸಗಟು ಮಾರಾಟ ಸಂಸ್ಥೆ ಜನತಾ ಬಝಾರ್ ಅಧ್ಯಕ್ಷರು, ವಿವಿಧ ಕನ್ನಡಪರ ಸಂಘಟನೆಗಳ ಗೌರವಾಧ್ಯಕ್ಷರು, ಗಡಿ ಸಲಹಾ ಸಮಿತಿಯ ಸದಸ್ಯರಾಗಿದ್ದ ಬೆಳಗಾವಿ ಮಹಾ ನಗರ ಪಾಲಿಕೆಯ ಮೊದಲ ಕನ್ನಡದ ಮೇಯರ ಎನಿಸಿಕೊಂಡಿದ್ದ ಸಿದ್ದನಗೌಡ ಪಾಟೀಲ್ (87)  ಬುಧವಾರ ನಿಧನರಾದರು.

ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸರಿಗೆ ಮಲ್ಲಾಪುರ ಗ್ರಾಮದವರಾಗಿದ್ದು ಅವರು 1934 ಎ. 18 ರಂದು ಕೃಷಿ ಕುಟುಂಬದಲ್ಲಿ ಜನಿಸಿದ್ದರು.

ಇವರು 50 ವರ್ಷಗಳ ಹಿಂದೆಯೇ ಬೆಳಗಾವಿಗೆ ಬಂದು ನೆಲೆಸಿದ್ದು, ಬೆಳಗಾವಿಯಲ್ಲಿ ವಿವಿಧ ಕನ್ನಡಪರ ಕೆಲಸಗಳಲ್ಲಿ ತೊಡಗಿ, ಬೆಳಗಾವಿಯಲ್ಲಿ 1952 ರಿಂದ ಸ್ಥಳೀಯ ರಾಜಕಾರಣದಲ್ಲಿ ಗುರುತಿಸಿಕೊಂಡು ಕನ್ನಡಪರ ಕೆಲಸಗಳಲ್ಲಿ ತೊಡಗಿಸಿಕೊಂಡರು. ಪ್ರಾಂತಗಳ ವಿಂಗಡನೆಯಲ್ಲಿ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಿದ ಸಂದರ್ಭ ಪ್ರಧಾನಿ ನೆಹರೂ ಬೆಳಗಾವಿಗೆ ಆಗಮಿಸಿದ್ದಾಗ ಅವರಿಗೆ ಕಪ್ಪು ಬಾವುಟ ತೋರಿಸಿ ವಿರೋಧ ವ್ಯಕ್ತಪಡಿಸಿದ್ದರು.

ನಂತರದ ದಿನಗಳಲ್ಲಿ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡವರು ಸಂಪೂರ್ಣವಾಗಿ ಮರಾಠಿಗರ ಹಿಡಿತದಲ್ಲಿದ್ದ ಬೆಳಗಾವಿ ಮಹಾ ನಗರಪಾಲಿಕೆಯ ಮೇಲೆ ಮೊಟ್ಟಮೊದಲ ಬಾರಿಗೆ ಕನ್ನಡದ ಮಹಾಪೌರರಾಗಿ ಮಹಾನಗರಪಾಲಿಕೆಯ ಮೊದಲ ಕನ್ನಡದ ಮೇಯರ್  ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇವರ ಕನ್ನಡಪರ ಹೋರಾಟಕ್ಕೆ ಅನೇಕ ಸಂಘ-ಸಂಸ್ಥೆಗಳು ಸಹಕಾರ ರತ್ನ,  ಕಾಯಕರತ್ನ, ಶ್ರೇಷ್ಠ ಸಹಕಾರಿ ಪ್ರಶಸ್ತಿ, ಗಡಿ ತಿಲಕ ಪ್ರಶಸ್ತಿ, ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿವೆ. 2008ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹ ನೀಡಿ ಸತ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News