5 ಸಾವಿರ ಕೋಟಿ ರೂ. ಲೂಟಿ ಮಾಡಿದ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ: ಕಾಂಗ್ರೆಸ್ ಆರೋಪ

Update: 2020-08-26 13:04 GMT

ಮೈಸೂರು,ಆ.26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವರ್ಗಾವಣೆ ದಂಧೆಯಲ್ಲಿ ಕೋಟಿಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕರುಗಳೇ ಬಿಜೆಪಿ ಹೈಕಮಾಂಡ್‍ಗೆ ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಪುತ್ರ ವಿಜಯೇಂದ್ರ ಅವರ ಆಟಾಟೋಪಕ್ಕೆ ಬೇಸತ್ತು ಬಿಜೆಪಿಯ ಏಳು ಮಂದಿ ಶಾಸಕರುಗಳು ಹೈಕಮಾಂಡ್‍ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಆ ಪತ್ರವನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಿದರು.

ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿಲ್ಲ. ಬದಲಿಗೆ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಕೈಯಲ್ಲಿದ್ದು, ಸೂಪರ್ ಸಿಎಂ ಆಗಿ ರಾಜ್ಯವನ್ನು ಲೂಟಿ ಮಾಡಿ ಸುಮಾರು 5 ಸಾವಿರ ಕೋಟಿಗಳಷ್ಟು ಹಣವನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ವಿಜಯೇಂದ್ರ 31 ಮಂದಿಯ ಆಪ್ತರ ಕೂಟವನ್ನು ರಚಿಸಿಕೊಂಡು ಒಂದೊಂದು ಇಲಾಖೆಗೆ ಒಬ್ಬೊಬ್ಬರನ್ನು ಬಿಟ್ಟು ದಂಧೆ ನಡೆಸುತ್ತಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.

ಗುತ್ತಿಗೆದಾರರು, ದಲ್ಲಾಳಿಗಳು, ಮಧ್ಯವರ್ತಿಗಳು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಇಚ್ಚಿಸುವವರು ಈ ಕೂಟವನ್ನು ಸಂಪರ್ಕಿಸಿ ಕಮಿಷನ್ ಆದಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಾರೆ. ವಿಜಯೇಂದ್ರ ಅವರ ಒಪ್ಪಿಗೆ ಇಲ್ಲದೆ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಏನೂ ಕೆಲಸ ಆಗುವುದಿಲ್ಲ. ಎಂಬುದೇ ಬಿಜೆಪಿ ಶಾಸಕರುಗಳ ಅಳಲು. ಸ್ವತಃ ಮುಖ್ಯಮಂತ್ರಿಗಳೇ ಅಸಹಾಯಕತೆಯನ್ನು ತೋರಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಶಾಸಕರುಗಳಾದ ನಮಗೆ ಸಿಎಂ ಪುತ್ರನ ಮುಂದೆ ಅಂಗಲಾಚುವುದು ನಾಚಿಕೆಗೇಡಿನ ಸಂಗತಿಯಾಗಿದೆ, ಪಕ್ಷಕ್ಕೆ ಮತ್ತು ನಾಡಿನ ಜನರಿಗೆ ಮಾಡುತ್ತಿರುವ ದ್ರೋಹ ಮತ್ತು ವಂಚನೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರಿಗೆ ಚೆಕ್ ಮೂಲಕ 20 ಲಕ್ಷ ಲಂಚವನ್ನು ಕೊಡಿಸಿ 2011 ರಲ್ಲಿ ಅವರನ್ನು ಜೈಲಿಗೆ ಕಳುಹಿಸಿದ್ದೆ ಇದೇ ವಿಜಯೇಂದ್ರ. ಈ ಅವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಚುನಾವಣೆಗಳನ್ನು ನಾವು ಸೋಲುತ್ತೇವೆ ಎಂದು ಬಿಜೆಪಿ ಶಾಸಕರೇ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಕಾಂಗ್ರೆಸ್ ಬರೆದಿಲ್ಲ. ಯಾವುದೇ ಪತ್ರ ಇದ್ದರೂ ಅದರ ಬಗ್ಗೆ ತನಿಖೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ವಿಜಯೇಂದ್ರ ಬೇನಾಮಿ ಆಸ್ತಿಗಳನ್ನು ಮಾಡಿದ್ದಾರೆ. ನರೇಂದ್ರ ಮೋದಿ ಹಂತದಿಂದಲೇ ಭ್ರಷ್ಟಾಚಾರ ಶುರುವಾಗಿದೆ ಎಂದು ಲಕ್ಷ್ಮಣ್ ಅವರು ಆರೋಪಿಸಿದರು.

ಬಿಜೆಪಿ ಹೈಕಮಾಂಡ್‍ಗೆ ಕಳುಹಿಸಿದ ಪತ್ರದಲ್ಲಿ ಏಳು ಜನ ಶಾಸಕರು ಸಹಿ ಮಾಡಿದ್ದಾರೆ. 32 ಜನರ ಕೂಟವನ್ನು ವಿಜಯೇಂದ್ರ ಮಾಡಿಕೊಂಡಿದ್ದಾರೆ. ವಿಜಯೇಂದ್ರ ಪರ್ಯಾಯ ಸರಕಾರ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಪತ್ರದಲ್ಲಿ ಏಳು ಜನ ಶಾಸಕರ ಸಹಿ ಇದೆ. ಆದರೆ ಅವರುಗಳು ಯಾರು ಎಂಬುದು ಗೊತ್ತಿಲ್ಲ. ಈ ಬಗ್ಗೆ ತಕ್ಷಣ ತನಿಖೆಯಾಗಬೇಕು ಎಂದು ಹತ್ತು ದಿನಗಳ ಗಡುವು ಕೊಡುತ್ತಿದ್ದೇವೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು  ಎಂದು ಒತ್ತಾಯಿಸಿದರು. 

ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡಿರುವ ಇತಿಹಾಸ ಇಲ್ಲ. ಮುಖ್ಯಮಂತ್ರಿಗಳು ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಆರೋಪ ಮಾಡುತ್ತಾರೆ. ದುಡ್ಡು ನಿಮ್ಮ ಮಗನ ಬಳಿಯೇ ಇದೆ. ಅದನ್ನು ಬಳಕೆ ಮಾಡಿ. ಇವರು ನೇಮಕ ಮಾಡಿರುವ ಇಲಾಖೆ ಬಗ್ಗೆ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಈ ಬಗ್ಗೆ ಸೆಪ್ಟಂಬರಲ್ಲಿ ಆಡಿಯೋ ಮತ್ತು ವಿಡಿಯೋವನ್ನು ದಾಖಲೆ ಸಮೇತ ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಎಂ.ಲಕ್ಷ್ಮಣ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಮಂಜುಳಾ ಮಾನಸ, ಶಿವಣ್ಣ, ಹೆಡತಲೆ ಮಂಜುನಾಥ್, ಶಿವಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News