×
Ad

‘ಮೈಸೂರ ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ, ವೀರ ಹೋರಾಟಗಾರ: ಎಚ್.ವಿಶ್ವನಾಥ್

Update: 2020-08-26 18:46 IST

ಬೆಂಗಳೂರು, ಆ.26: ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಮಾಂಡರ್ ಇನ್ ಚೀಫ್. ಅದೇ ರೀತಿ, ದಕ್ಷಿಣ ಭಾಗದಲ್ಲಿ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯದ ಕಹಳೆ ಊದಿದವರು ಎಂದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ. ವೀರ ಹೋರಾಟಗಾರ. ಗಾಂಧೀಜಿಯಿಂದ ಟಿಪ್ಪು ತನಕ ವಿದ್ಯಾರ್ಥಿಗಳು ಎಲ್ಲರ ಚರಿತ್ರೆಯನ್ನು ಓದಬೇಕು ಎಂದರು.

ಬಿಜೆಪಿ ಪಕ್ಷದವರು ಟಿಪ್ಪು ಸುಲ್ತಾನ್‍ನನ್ನು ವಿರೋಧಿಸುತ್ತಾರಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗೆಲ್ಲ ಹೇಳಬಾರದು, ಟಿಪ್ಪು ಸುಲ್ತಾನ್ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ. ಆತ ಈ ನೆಲದ ಮಗ, ವೀರ ಹೋರಾಟಗಾರ ಎಂದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಆಗಲೇಬೇಕು. ರಾಯಣ್ಣ ಸ್ವಾತಂತ್ರ್ಯಕ್ಕೆ ಹೋರಾಡಿದ ಅಪ್ರತಿಮ ವೀರ. ಅವರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಅವರ ಪ್ರತಿಮೆ ಸ್ಥಾಪಿಸುವುದು ಸರಕಾರದ ಕರ್ತವ್ಯ ಎಂದು ವಿಶ್ವನಾಥ್ ಹೇಳಿದರು.

ಸಚಿವ ಸ್ಥಾನಕ್ಕಾಗಿ ನಾನು ಮುಖ್ಯಮಂತ್ರಿ ಎದುರು ಯಾವ ಬೇಡಿಕೆಯನ್ನು ಇಟ್ಟಿಲ್ಲ. ಅವರೇ ತಿಳಿದು ಸಚಿವ ಸ್ಥಾನ ಕೊಡಬೇಕು. ನಾನು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ. 1978ರಲ್ಲೇ ನಾನು ರಾಜಕೀಯ ಪ್ರವೇಶ ಮಾಡಿದವನು. ನನಗೆ ಸುದೀರ್ಘ ಆಡಳಿತದ ಅನುಭವ ಇದೆ. ಈ ಅನುಭವವನ್ನು ಸರಕಾರ ಬಳಸಿಕೊಳ್ಳಬೇಕು ಎಂದು ವಿಶ್ವನಾಥ್ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂಬ ನಂಬಿಕೆಯಿದೆ. ಅದೇ ರೀತಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನ್ನೋದು ಸೋನೆ ಮಳೆ ಇದ್ದಂತೆ ಬರುತ್ತೇ, ಹೋಗುತ್ತೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿಗೆ ಈಗ ಮಾಡಲು ಏನು ಕೆಲಸವಿಲ್ಲ. ಆದುದರಿಂದ, ಸರಕಾರದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿರುತ್ತಾರೆ ಎಂದು ಅವರು ದೂರಿದರು.

‘ಮೈಸೂರು ಹುಲಿ’ ಖ್ಯಾತಿಯ ಟಿಪ್ಪು ನಿರ್ಮಾಣ ಮಾಡಿರುವ ದೇವಸ್ಥಾನ ಮತ್ತು ಕೋಟೆಗಳನ್ನು ನಾಶಮಾಡಲು ಆಗುತ್ತಾ? ಬ್ರಿಟೀಷರ ವಿರುದ್ಧ ಅವರು ಹೋರಾಡಿದ್ದನ್ನು ಸುಳ್ಳು ಎಂದು ಹೇಳಲಾಗುತ್ತದೆಯೇ? ಬಿಜೆಪಿ ನಾಯಕರು ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ, ಎಚ್.ವಿಶ್ವನಾಥ್ ಸತ್ಯವನ್ನು ಹೇಳಿದ್ದಾರೆ. ಹೀಗಾಗಿ ನಾನು ಅವರ ಹೇಳಿಕೆಯನ್ನು ಬೆಂಬಲಿಸುವೆ.

-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಬಿಜೆಪಿ ಸರಕಾರ ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಪಠ್ಯ ಪುಸ್ತಕದಿಂದ ತೆಗೆಯುವ ಕೆಲಸ ಮಾಡುತ್ತಿದೆ. ಆದರೆ, ಬಿಜೆಪಿ ಪಕ್ಷದ ನಾಯಕ ಎಚ್.ವಿಶ್ವನಾಥ್ ಟಿಪ್ಪು ಈ ದೇಶ ಹಾಗೂ ಈ ನೆಲದ ಮಣ್ಣಿನ ಮಗ ಎನ್ನುತ್ತಾರೆ. ಬ್ರಿಟೀಷರ ವಿರುದ್ಧ ಹೋರಾಡಿದ ಹೋರಾಟಗಾರ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಬಿಜೆಪಿ ನಾಯಕರೇ ಈಗಲಾದರೂ ಸತ್ಯ ಅರ್ಥವಾಯಿತೇ?

-ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News