ಕಾನೂನು ಪದವಿಯ ಒಂದರಿಂದ 4ನೆ ವರ್ಷದ ವರೆಗಿನ ಪರೀಕ್ಷೆಗಳು ಮುಂದೂಡಿಕೆ: ಸಚಿವ ಮಾಧುಸ್ವಾಮಿ

Update: 2020-08-26 14:56 GMT

ಬೆಂಗಳೂರು, ಆ.26: ಕಾನೂನು ಪದವಿಯ ಪ್ರಥಮ ವರ್ಷದಿಂದ ನಾಲ್ಕನೆ ವರ್ಷದ ವರೆಗಿನ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದ್ದು, ಅಂತಿಮ ವರ್ಷದ ಪರೀಕ್ಷೆಗಳನ್ನು ಅಕ್ಟೋಬರ್ ನಲ್ಲಿ ಆನ್‍ಲೈನ್ ಮೂಲಕ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಮುಂದೂಡುವಂತೆ ಸರಕಾರಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಶಿಕ್ಷಣ ತಜ್ಞರು, ರಾಜಕೀಯ ಮುಖಂಡರು ಪರೀಕ್ಷೆಗಳನ್ನು ಮುಂದೂಡುವಂತೆ ಬೇಡಿಕೆ ಇಟ್ಟಿದ್ದರು ಎಂದರು.

ಪ್ರಥಮ ವರ್ಷದಿಂದ ನಾಲ್ಕು ವರ್ಷದ ತನಕದ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಮುಂದಿನ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡುತ್ತೇವೆ. ಅವರ ಹಿಂದಿನ ಸೆಮಿಸ್ಟರ್ ಪರೀಕ್ಷೆಯ ನಿರ್ವಹಣೆ, ಆಂತರಿಕ ಮೌಲ್ಯಮಾಪನ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಪ್ರಮೋಟ್ (ಕ್ಯಾರಿ ಓವರ್) ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ವಿವಿ, ಕಾಲೇಜು ಪುನಾರಂಭವಾದ ಬಳಿಕ ಪರೀಕ್ಷೆ ದಿನಾಂಕ ನಿಗದಿ ಮಾಡುತ್ತೇವೆ. ಆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು. ಅಂತಿಮ ಸೆಮಿಸ್ಟರ್ ಪರೀಕ್ಷೆ ಉತ್ತೀರ್ಣರಾದರೆ ಮಾತ್ರ ಅವರಿಗೆ ಪದವಿ ಪ್ರಮಾಣಪತ್ರ (ಡಿಗ್ರಿ ಸರ್ಟಿಫಿಕೇಟ್) ಸಿಗಲಿದೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಕಾನೂನು ಪದವಿ ಅಂತಿಮ ವರ್ಷದ ಪರೀಕ್ಷೆಗಳನ್ನು ಅಕ್ಟೋಬರ್ ನಲ್ಲಿ ನಡೆಸುತ್ತೇವೆ. ಬಳಿಕ ಕೇಂದ್ರ ಸರಕಾರ ಹೊರಡಿಸುವ ಅನ್‍ಲಾಕ್ ಮಾರ್ಗಸೂಚಿಯನ್ವಯ ಕಾಲೇಜುಗಳನ್ನು ಪುನರ್ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಮಾಧುಸ್ವಾಮಿ ಹೇಳಿದರು.

ಅಂತಿಮ ವರ್ಷದ ಕಾನೂನು ಪರೀಕ್ಷೆಗಳನ್ನು ಆನ್‍ಲೈನ್ ಮೂಲಕ ನಡೆಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸೂಚಿಸಿತ್ತು. ಈ ಸಂಬಂಧ ಅಂತಿಮ ವರ್ಷದ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಆದರೆ, ಹಲವು ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಪರೀಕ್ಷೆ ಮಾಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News