ಶಿಕ್ಷಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವ ಶಿಕ್ಷಕ ಮಿತ್ರ ಆ್ಯಪ್ ಅಭಿವೃದ್ಧಿ
ಬೆಂಗಳೂರು, ಆ.26: ಶಿಕ್ಷಕರ ಸೇವಾ ವಿಷಯಗಳು, ಮಾಹಿತಿ ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ‘ಶಿಕ್ಷಕ ಮಿತ್ರ’ ಎಂಬ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.
ಸರಕಾರದ ಇ–ಆಡಳಿತ ಇಲಾಖೆಯ ನೆರವಿನಲ್ಲಿ ‘ಶಿಕ್ಷಕ ಮಿತ್ರ’ ಆ್ಯಪ್‍ನಲ್ಲಿ ಈಗಾಗಲೇ ರಾಜ್ಯದ 2.50 ಲಕ್ಷ ಶಿಕ್ಷಕರ ಮಾಹಿತಿಗಳನ್ನು ಅಪ್‍ಲೋಡ್ ಮಾಡಲಾಗಿದೆ. ಸೆಪ್ಟಂಬರ್ ಮೊದಲ ವಾರದಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಇಲಾಖೆ ಚಾಲನೆ ನೀಡಲಿದ್ದು, ಈ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಆ ಮೂಲಕ, ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲು ಸಂಪೂರ್ಣ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೆ ಇದೇ ಮೊದಲ ಬಾರಿಗೆ ಇಲಾಖೆ ಸಜ್ಜಾಗಿದೆ.
ವರ್ಗಾವಣೆ ಬಯಸಿರುವ ಶಿಕ್ಷಕರು ತಮ್ಮ ಮೊಬೈಲ್‍ನಲ್ಲಿ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಂಡು, ತಂತ್ರಾಂಶ ಚಾಲನೆಗೊಳ್ಳುತ್ತಿದ್ದಂತೆ ತಾವಿರುವ ಸ್ಥಳದಿಂದಲೇ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಸಂಬಂಧಿಸಿದ ಪ್ರಗತಿಯ ಮಾಹಿತಿಯನ್ನೊಳಗೊಂಡ ಸಂದೇಶ ಮೊಬೈಲ್‍ಗೆ ಮರು ರವಾನೆ ಆಗಲಿದೆ. ವರ್ಗಾವಣೆ ವೇಳಾಪಟ್ಟಿಗೆ ಅನುಗುಣವಾಗಿ ಇದರಲ್ಲಿ ಮಾಹಿತಿಗಳು ಅಪ್‍ಡೇಟ್ ಆಗಲಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಕಳೆದ ಬಾರಿ ಕಡ್ಡಾಯ ವರ್ಗಾವಣೆ ಆಗಬೇಕಾದವರು ಮತ್ತು ಹೆಚ್ಚುವರಿ ಶಿಕ್ಷಕರೆಂದು ವರ್ಗಾವಣೆ ಆಗಬೇಕಾದವರಿಗೆ ಈ ಬಾರಿ ಮೊದಲ ಆದ್ಯತೆ ಕಲ್ಪಿಸಲಾಗಿದೆ. ನಂತರ 50 ವರ್ಷ ದಾಟಿದವರಿಗೆ ವರ್ಗಾವಣೆಗೆ ವಿನಾಯಿತಿ ಸೇರಿದಂತೆ ಶಿಕ್ಷಕಸ್ನೇಹಿ ವ್ಯವಸ್ಥೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆಗೆ ಕರೆ ಅಥವಾ ವಾಟ್ಸ್ ಆಪ್ ಮಾಡಬಹುದು. ಟೋಲ್ ಫ್ರೀ ಸಂಖ್ಯೆಯೂ ಇರಲಿದೆ. ದೂರುಗಳ ಪ್ರತಿ ಹಂತದ ಸ್ಥಿತಿಯ ಬಗ್ಗೆಯೂ ದೂರದಾರರ ಮೊಬೈಲ್‍ಗೆ ಸಂದೇಶ ರವಾನೆ ಆಗಲಿದೆ.
28ರಂದು ಚಾಲನೆ: ಆ.28ರಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದಲ್ಲಿ ‘ಶಿಕ್ಷಕ ಮಿತ್ರ’ ಆ್ಯಪ್ ಹಾಗೂ ಡ್ಯಾಶ್‍ಬೋರ್ಡ್ ಗೆ ಚಾಲನೆ ನೀಡಲಾಗುತ್ತದೆ. ಅದೇ ದಿನ ಎಸ್. ಸುರೇಶ್ ಕುಮಾರ್ ಶಿಕ್ಷಕರ ಸದನದಲ್ಲಿ ಸಹಾಯವಾಣಿಗೆ ಚಾಲನೆ ನೀಡಲಿದ್ದಾರೆ.