ಶಿವಮೊಗ್ಗ: ಶಿಕ್ಷಕಿಯನ್ನು ಅಡ್ಡಗಟ್ಟಿ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
Update: 2020-08-26 22:36 IST
ಶಿವಮೊಗ್ಗ, ಆ.26: ಬೈಕಿನಲ್ಲಿ ತೆರಳುತ್ತಿದ್ದ ಶಿಕ್ಷಕಿಯೊಬ್ಬರನ್ನು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹೊಸನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಡಿ ಕೊಡಸೆ ಸರ್ಕಾರಿ ಶಾಲೆ ಶಿಕ್ಷಕಿ ಮಂಜುಳ, ತಮ್ಮ ಬೈಕಿನಲ್ಲಿ ಆರೋಡಿ ಸಂಸೆ ಕಡೆ ತೆರಳುತ್ತಿದ್ದಾಗ ಬರೇಕಲ್ ಹೋಂಸ್ಟೇ ರಸ್ತೆಯ ಬಳಿ
ಮೂವರು ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿದ್ದಾರೆ. ಹೆಲ್ಮೆಟ್, ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳು ಶಿಕ್ಷಕಿಯನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನಾಭರಣ ದೋಚಿದ್ದಾರೆ.
ಶಿಕ್ಷಕಿ ಧರಿಸಿದ್ದ ಮಾಂಗಲ್ಯ ಸರ, ಬಳೆಗಳು, ಉಂಗುರಗಳು ಸೇರಿ ಸುಮಾರು 92 ಗ್ರಾಂ ನ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದಾರೆ. ಇದರ ಮೌಲ್ಯ ಐದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಹೊಸನಗರ ಠಾಣೆ ಸಿಪಿಐ ಮಧುಸೂದನ್, ಪಿಎಸ್ಐ ಆರ್.ಸಿ ಕೊಪ್ಪದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.