×
Ad

ಕೊಡಗಿನ ಸೂರಜ್ ಅಮೆರಿಕಾದ ಪ್ರತಿಷ್ಠಿತ ನೌಕಾಯುದ್ಧ ಕಾಲೇಜಿಗೆ ಭಾರತದ ಪ್ರತಿನಿಧಿ

Update: 2020-08-26 23:09 IST

ಮಡಿಕೇರಿ, ಆ.26: ಕೊಡಗಿನ ಲೆಫ್ಟಿನೆಂಟ್ ಕಮಾಂಡರ್ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅಮೆರಿಕದ ಪ್ರತಿಷ್ಠಿತ ನೌಕಾಯುದ್ಧ ಕಾಲೇಜಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. 

ಮೂಲತಃ ಗೋಣಿಕೊಪ್ಪ ಅರ್ವತೋಕ್ಲು ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಂ.ಎ.ಕಾರ್ಯಪ್ಪ ಹಾಗೂ ಸರಸ್ವತಿ ಕಾರ್ಯಪ್ಪ (ತವರುಮನೆ ಅಣ್ಣಳಮಡ)ರ ಪುತ್ರರಾಗಿದ್ದು, ಡೆಹರಾಡೂನ್‌ನ ರಾಷ್ಟ್ರೀಯ ಮಿಲಿಟರಿ ಕಾಲೇಜು (ಆರ್ ಐಎಂಸಿ)ಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ ನಂತರ ನೇವಲ್ ಅಕಾಡಮಿಯಿಂದ ಅಕಾಡಮಿ ಕೆಡೆಟ್ ಕ್ಯಾಪ್ಟನ್ ಆಗಿ ಗುರುತಿಸಿಕೊಳ್ಳುವುದರೊಂದಿಗೆ ಪದವಿ ಪಡೆದಿರುತ್ತಾರೆ. 2010ರಲ್ಲಿ ಭಾರತೀಯ ನೌಕಾದಳದ ಅಧಿಕಾರಿಯಾಗಿ ಇವರ ಎಲ್ಲಾ ಚಟುವಟಿಕೆಗಳಲ್ಲಿ ಮೊದಲಿಗರಿದ್ದು, ‘ಸ್ವಾರ್ಡ್ ಆಫ್ ಹಾನರ್’ ಹಾಗೂ ‘ಚೀಫ್ ಆಫ್ ನೇವಲ್ ಸ್ಟಾಪ್’ ಬಂಗಾರದ ಪದಕಕ್ಕೂ ಭಾಜನರಾಗುವುದರೊಂದಿಗೆ 2010ರಲ್ಲಿ ನೌಕಾ ಪಡೆಯ ಉತ್ಕೃಷ್ಠ ಕಾರ್ಯ ನಿವಾಹಕ ಪಡೆಯ ಅಧಿಕಾರಿಯಾಗಿ ಸೇರ್ಪಡೆಗೊಂಡಿರುತ್ತಾರೆ.

ಸೂರಜ್ ಅವರ ಕಾರ್ಯಾವಧಿಯಲ್ಲಿ ಹಲವಾರು ಸ್ಥಾನಗಳನ್ನು ಅಲಂಕರಿಸಿದ್ದು, ಕಮಾಂಡಿಂಗ್ ಆಫೀಸರ್, ನೇವಲ್ ಅಕಾಡಮಿಯ ಬೋಧಕ ಸೇರಿದಂತೆ ನೌಕಾಪಡೆಯ ಕಾರ್ಯಾಚರಣೆಯ ಮುಂಚೂಣಿ ಸ್ಥಾನದಲ್ಲಿದ್ದರು. 2 0 1 6   ವಿಶಾಖಪಟ್ಟಣದಲ್ಲಿ ರಾಷ್ಟ್ರಪತಿಗಳಿಂದ ‘ಗಾರ್ಡ್ ಆಫ್ ಹಾನರ್’ ನ ಗೌರವಕ್ಕೆ ಪಾತ್ರರಾಗಿದ್ದರು. ಈ ವರ್ಷ ಅಮೇರಿಕದಲ್ಲಿ ನಡೆಯುವ ಸಿಬ್ಬಂದಿ ತರಬೇತಿಯಲ್ಲಿ 52 ದೇಶಗಳ ಅಧಿಕಾರಿಗಳ ಪೈಕಿ ಇವರು ಒಬ್ಬರಾಗಿದ್ದಾರೆ.

ಸೂರಜ್ ಅವರ ಪತ್ನಿ ಡಾ.ಯಮುನಾ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೂರಜ್ ಅವರು ಹೇಳುವಂತೆ ಅವರ ತಾಯಿ ಸರಸ್ವತಿ ಕಾರ್ಯಪ್ಪ ತಮ್ಮ ಜೀವನದುದ್ದಕ್ಕೂ ಸ್ಫೂರ್ತಿಯಾಗಿದ್ದರು. ತಮಗೆ ಸಂದಿರುವ ಗೌರವವನ್ನು ಅವರ ತಾಯಿಗೆ ಸಮರ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News