ಎಸೆಸೆಲ್ಸಿಯಲ್ಲಿ ಜಿಲ್ಲಾವಾರು ಹೆಚ್ಚು ಅಂಕ ಪಡೆದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ಪ್ರೋತ್ಸಾಹ ಧನ

Update: 2020-08-26 18:20 GMT

ಬೆಂಗಳೂರು, ಆ.26: 2019-20ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಒಂದು ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಹಣವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಸಂಬಂಧ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ.

ಇದೇ ರೀತಿಯಲ್ಲಿ ಎಸೆಸೆಲ್ಸಿಯಲ್ಲಿ ಶೇ.60 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 7ಸಾವಿರ ರೂ. ಹಾಗೂ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 15 ಸಾವಿರ ರೂ.ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತದೆ.

ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ತಾಂತ್ರಿಕ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಸಮಾಜ ಕಲ್ಯಾಣ ಇಲಾಖೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಕಚೇರಿಯಿಂದ ಪಾವತಿ ಮಾಡಲಾಗುತ್ತದೆ.

ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ನ.30 ಕೊನೆಯ ದಿನವಾಗಿರುತ್ತದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.sw.kar.nic.inನ್ನು ವೀಕ್ಷಿಸಬಹುದು ಹಾಗೂ ಆಯಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News