ಉತ್ತರ ಪ್ರದೇಶ: ಮಹಿಳೆ, ವಿಕಲಚೇತನ ಪುರುಷನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

Update: 2020-08-27 06:29 GMT

ಕನೌಜ್, ಆ.27: ಉತ್ತರಪ್ರದೇಶದ ಕನೌಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಹಿಳೆ ಹಾಗೂ ವಿಕಲಚೇತನ ಪುರುಷನಿಗೆ ಹಲ್ಲೆ, ಕಿರುಕುಳ ನೀಡಿದ್ದಲ್ಲದೆ, ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿ ಅವಮಾನಿಸಿರುವ ಅಮಾನವೀಯ ಘಟನೆ ವರದಿಯಾಗಿದೆ.ಮಹಿಳೆಯ ಸಂಬಂಧಿಕರೇ ಈ ಕೃತ್ಯ ಎಸೆಗಿದ್ದು, ಮಹಿಳೆಯನ್ನು ಅವಮಾನಿಸುವ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

37 ವಯಸ್ಸಿನ ಮಹಿಳೆಯ ಪತಿ ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. 40ರ ವಯಸ್ಸಿನ ವಿಕಲಚೇತನ ವ್ಯಕ್ತಿ ಈ ಮಹಿಳೆಗೆ ಸಹಾಯ ಮಾಡುತ್ತಿದ್ದ. ಮಹಿಳೆಯ ಸಂಬಂಧಿಕರು ಇವರಿಬ್ಬರ ಸ್ನೇಹವನ್ನು ಇಷ್ಟಪಟ್ಟಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಹಾಗೂ ಪುರುಷನಿಗೆ ಚಪ್ಪಲಿ ಹಾರ ಹಾಕಿ ಕಿರಿದಾದ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗಿದ್ದು, ಗ್ರಾಮದ ಪುರುಷರು ಹಾಗೂ ಮಕ್ಕಳು ಅವರ ಹಿಂದೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ವೀಡಿಯೊದಲ್ಲಿದೆ.

ಘಟನೆಗೆ ಸಂಬಂಧಿಸಿ ಮಹಿಳೆಯ ಇಬ್ಬರು ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಗ್ರಾಮದ ಇತರರೊಂದಿಗೆ ಸೇರಿಕೊಂಡು ಮಹಿಳೆ ಹಾಗೂ ಪುರುಷನ ತಲೆ ಬೋಳಿಸಿದ್ದಲ್ಲದೆ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದರು. ಎಫ್‌ಐಆರ್‌ನಲ್ಲಿ ಒಟ್ಟು 8 ಜನರನ್ನು ಹೆಸರಿಸಲಾಗಿದ್ದು, ಹಲ್ಲೆ, ನೋವು ಹಾಗೂ ಆಕ್ರಮಣ ನಡೆಸಿರುವ ಆರೋಪ ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News