ಟಿಪ್ಪು ಸುಲ್ತಾನ್ ಬಗ್ಗೆ ಎಚ್.ವಿಶ್ವನಾಥ್ ಹೇಳಿಕೆಗೆ ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ...

Update: 2020-08-27 11:57 GMT

ಬೆಂಗಳೂರು, ಆ. 27: `ಟಿಪ್ಪು ಸುಲ್ತಾನ್ ಪಠ್ಯದ ವಿಚಾರ ಇದೀಗ ಮುಗಿದ ಅಧ್ಯಾಯ. ಈ ನೆಲದಲ್ಲಿ ಅನೇಕರು ಹುಟ್ಟಿದ್ದಾರೆ, ಅನೇಕರು ಸತ್ತಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿರುವ ಎಚ್.ವಿಶ್ವನಾಥ್ ಅವರು ಈಗಷ್ಟೇ ಬಿಜೆಪಿಗೆ ಬಂದಿದ್ದಾರೆ. ಅವರು ಟಿಪ್ಪು ಸುಲ್ತಾನ್ ಬಗ್ಗೆ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ. ಆತ ಯಾವುದೇ ಒಂದು ಜಾತಿ-ಧರ್ಮಕ್ಕೆ ಸೇರಿದವನಲ್ಲ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು. ಮುಂದುವರಿದು ಮಾತನಾಡಿದ ಕೆ.ಎಸ್.ಈಶ್ವರಪ್ಪ, ಟಿಪ್ಪು ಸುಲ್ತಾನ್ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಎಚ್.ವಿಶ್ವನಾಥ್ ಆವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರದಲ್ಲಿ ಕಾಗಿನೆಲೆ ಶ್ರೀಗಳು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ. ಪ್ರತಿಮೆ ನಿರ್ಮಾಣಕ್ಕೆ ಸರಕಾರ ಸಿದ್ಧವಿದೆ. ಆದಷ್ಟು ಶೀಘ್ರದಲ್ಲೆ ಈ ವಿವಾದ ಬಗೆಹರಿಸುತ್ತೇವೆ. ನಾನೂ ಬೆಳಗಾವಿಗೆ ತೆರಳಿದ್ದು, ಎಲ್ಲರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಅಲ್ಲದೆ, ಪುತ್ಥಳಿ ಸ್ಥಾಪಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಹೇಳಿದರು.

ಬೀಜ `ಭಯೋತ್ಪಾದನೆ' ವಿಚಾರ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಅನಾಮಧೇಯ ಹೆಸರಿನಲ್ಲಿ ಬೀಜಗಳು ಬರುತ್ತಿವೆ ಎಂಬ ವಿಚಾರ ಮಾಧ್ಯಮಗಳಿಗೆ ಗೊತ್ತಾಗಿದೆ. ಈ ಸಂಬಂಧ ಸರಕಾರ ಶೀಘ್ರವೇ ಸೂಕ್ತವಾದ ತನಿಖೆ ನಡೆಸಿ ಮಾಹಿತಿ ಪಡೆದುಕೊಳ್ಳಲಿದ್ದು, ಆ ಬಳಿಕ ತಪ್ಪಿತಸ್ಥರು ಕಂಡು ಬಂದರೆ ಕ್ರಮ ಕೈಗೊಳ್ಳಲಿದೆ. ಈ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗಲು ಸರಕಾರ ಬಿಡದು ಎಂದು ಅಭಯ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News