×
Ad

ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರು ಸ್ಥಾಪಿಸಲು ಆಗ್ರಹಿಸಿ 'ಬೆಳಗಾವಿ ಚಲೋ'

Update: 2020-08-27 20:41 IST

ಬೆಳಗಾವಿ, ಆ. 27: ಇಲ್ಲಿನ ಪೀರನವಾಡಿ ಕ್ರಾಸ್‍ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಸ್ಥಾಪನೆಗೆ ಆಗ್ರಹಿಸಿ ರಾಯಣ್ಣ ಅಭಿಮಾನಿಗಳು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಅಲ್ಲದೆ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿಯೂ ರಾಯಣ್ಣನ ಪುತ್ಥಳಿ ಸ್ಥಾಪಿಸಲು ಒತ್ತಾಯಿಸಿ 'ಬೆಳಗಾವಿ ಚಲೋ' ನಡೆಸಲಾಯಿತು.

ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ನೂರಾರು ಕಾರ್ಯಕರ್ತರು ರಾಜ್ಯ ಸರಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರಲ್ಲದೆ, ಪೀರನವಾಡಿ ಕ್ರಾಸ್‍ನಲ್ಲಿ ರಾಯಣ್ಣನ ಪುತ್ಥಳಿ ಸ್ಥಾಪಿಸದಿದ್ದರೆ ಸರಕಾರದ ವಿರುದ್ಧ ಚಳವಳಿ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಯಣ್ಣನ ಪ್ರತಿಮೆ ತೆರವುಗೊಳಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.

ಮನವೊಲಿಕೆ: ಪೀರನವಾಡಿ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಚಲೋ ನಡೆಸಿದ ಕನ್ನಡಪರ ಸಂಘಟನೆಗಳು ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಮನವೊಲಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ವಿವಾದದ ಸ್ವರೂಪ ಪಡೆದಿದ್ದ ಪೀರನವಾಡಿ ಕ್ರಾಸ್ ರಾಯಣ್ಣನ ಪುತ್ಥಳಿ ಸ್ಥಾಪನೆ ವಿಚಾರ ಕೊಂಚ ತಣ್ಣಗಾಗಿದೆ.

ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಳಗಾವಿಗೆ ಆಗಮಿಸಿದ ರಾಯಣ್ಣ ಅಭಿಮಾನಿಗಳು ಸುವರ್ಣಸೌಧದ ಸಮೀಪ ಜಮಾಯಿಸಿ, ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪಾದಯಾತ್ರೆ ಮೂಲಕ ತೆರಳುತ್ತಿದ್ದಾಗ ಪೊಲೀಸರು ನಗರದ ಯಡಿಯೂರಪ್ಪ ಮಾರ್ಗದಲ್ಲಿ ತಡೆ ಹಿಡಿದಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಭೇಟಿ ನೀಡಿ ಅಲ್ಲಿಯೇ ಮನವಿ ಸ್ವೀಕರಿಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಲು ಚಳವಳಿಗಾರರು ಪಟ್ಟುಹಿಡಿದರು.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬಂದ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಯಡಿಯೂರಪ್ಪ ಮಾರ್ಗದಲ್ಲಿದ್ದ ಪ್ರತಿಭಟನಾಕಾರರ ಬಳಿ ತೆರಳಿ ಮನವೊಲಿಸಲು ಯತ್ನಿಸಿದರು. ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ 2018ರಲ್ಲಿ ನಾನೇ ಮೊದಲು ಸರಕಾರಕ್ಕೆ ಪತ್ರ ಬರೆದಿದ್ದೇನೆ. ರಸ್ತೆ ಅಗಲೀಕರಣ ವೇಳೆ ಸಮಸ್ಯೆ, ಕಾನೂನು ತೊಡಕು ಇರುವುದರಿಂದ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಅದರ ಬಗ್ಗೆಯೂ ಚರ್ಚಿಸಬೇಕಿದೆ. ಆ.29ಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ನಗರಕ್ಕೆ ಆಗಮಿಸಲಿದ್ದಾರೆ. ಅವರ ಜೊತೆಯೂ ಚರ್ಚೆ ಮಾಡುತ್ತೇನೆ. ಅಲ್ಲದೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸೇರಿ ಎಲ್ಲ ನಾಯಕರ ಜೊತೆ ಚರ್ಚಿಸಿ ರಾಯಣ್ಣ ಪುತ್ಥಳಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ಆ. 29ರ ವರೆಗೆ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ಹಿಂಪಡೆದಿದ್ದಾರೆ.

ಪೊಲೀಸ್ ಬಂದೋಬಸ್ತ್: ಪ್ರತಿಭಟನೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆಲ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಸಮೀಪದ ಸಂಗೊಳ್ಳಿರಾಯಣ್ಣ ರಸ್ತೆ ತಡೆ ಹಿಡಿದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಹರಸಾಹಸ ಪಟ್ಟು ಪ್ರತಿಭಟನಾಕಾರ ಮನವೊಲಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ವಿಶ್ವಾಸಕ್ಕೆ ತೆಗೆದುಕೊಂಡು ಪುತ್ಥಳಿ ಸ್ಥಾಪನೆ

ಪೀರನವಾಡಿ ಕ್ರಾಸ್‍ನಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಸಂಬಂಧ ಈಗಾಗಲೇ ಮುಖ್ಯಮಂತ್ರಿ, ಗೃಹ ಸಚಿವರು, ಕಾಗಿನೆಲೆ ಶ್ರೀಗಳೊಂದಿಗೆ ಸಮಾಲೋಚನೆ ನಡೆದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಸ್ಥಳೀಯರೊಂದಿಗೆ ಜೊತೆ ಚರ್ಚಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜಕ್ಕೆ ಹಿತವಾಗುವ ದೃಷ್ಟಿಯಿಂದ ಒಳ್ಳೆಯ ನಿರ್ಣಯ ಕೈಗೊಳ್ಳುತ್ತೇವೆ. ಅದೇ ಸ್ಥಳದಲ್ಲಿ ರಾಯಣ್ಣನ ಪುತ್ಥಳಿ ಸ್ಥಾಪಿಸಲಾಗುವುದು'

-ರಮೇಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News