ಧರ್ಮದ ವೈರಸ್ ಅಂಟಿದವರು ಮಾತ್ರ ಟಿಪ್ಪುವನ್ನು ವಿರೋಧಿಸುತ್ತಾರೆ: ಸಿ.ಎಂ.ಇಬ್ರಾಹೀಂ
ಬೆಂಗಳೂರು, ಆ.27: ಜಾತಿ-ಧರ್ಮದ ವೈರಸ್ ಅಂಟಿದವರು ಮಾತ್ರ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್‍ರನ್ನು ವಿರೋಧಿಸುತ್ತಾರೆಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಅಭಿಪ್ರಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್‍ರ ಜನಪರ ಕಾರ್ಯಕ್ರಮ, ಅವರ ದೇಶ ಪ್ರೇಮದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಗೂ ಗೊತ್ತಿದೆ. ಆದರೆ, ಕೇವಲ ರಾಜಕೀಯ ಹಿತಾಸಕ್ತಿಗಾಗಿ ಮಾತ್ರ ವಿರೋಧಿಸುತ್ತಿದ್ದಾರೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರನನ್ನು ದೇಶದ್ರೋಹಿ ಎಂಬ ರೀತಿಯಲ್ಲಿ ಬಿಂಬಿಸುವುದು ಬಿಡಬೇಕೆಂದು ತಿಳಿಸಿದರು.
ನಮ್ಮ ಇತಿಹಾಸದ ಪುಟಗಳಲ್ಲಿ ಟಿಪ್ಪು ಸುಲ್ತಾನ್ ಶೃಂಗೇರಿ ಮಠ ಹಾಗೂ ನಂಜನಗೂಡು ದೇವಸ್ಥಾನದ ಬಗ್ಗೆ ಹೇಗೆ ನಡೆದುಕೊಂಡರು ಎಂಬುದು ದಾಖಲಾಗಿದೆ. ನಂಜನಗೂಡಿನ ಶ್ರೀಕಂಠೇಶ್ವರನಿಗೆ ಇಂದಿಗೂ ಟಿಪ್ಪು ಕೊಟ್ಟ ಪಚ್ಚೆವಜ್ರಕ್ಕೆ ಮಂಗಳಾರತಿ ನಡೆಯುತ್ತಿದೆ. ಶೃಂಗೇರಿಯ ಮಠಕ್ಕೆ ಹೋಗಿ ಟಿಪ್ಪು ಬಗ್ಗೆ ಕೇಳಿದರೆ ಸತ್ಯಾಂಶ ಹೇಳುತ್ತಾರೆ ಎಂದು ಅವರು ಹೇಳಿದರು.
ಇತ್ತೀಚೆಗಷ್ಟೆ ಬಿಜೆಪಿಗೆ ಸೇರ್ಪಡೆಗೊಂಡ ಎಚ್.ವಿಶ್ವನಾಥ್ ಟಿಪ್ಪು ಕುರಿತು ಸತ್ಯವನ್ನೇ ಹೇಳಿದ್ದಾರೆ. ಆ ಮೂಲಕವಾದರೂ ಟಿಪ್ಪು ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದನ್ನು ಬಿಡಲಿ ಎಂದು ಅವರು ಹೇಳಿದ್ದಾರೆ.