ರಾಜ್ಯದಿಂದ ಸಕ್ಕರೆ ರಫ್ತು ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿಲ್ಲ: ಸಚಿವ ಶಿವರಾಮ್ ಹೆಬ್ಬಾರ್

Update: 2020-08-27 17:24 GMT

ಬೆಳಗಾವಿ, ಆ.27: ರಾಜ್ಯದಲ್ಲಿ ಒಂದು ಕೋಟಿ ಟನ್ ಸಕ್ಕರೆ ಸಂಗ್ರಹ ಇದೆ. ಕೇಂದ್ರ ಸರಕಾರ ಸಂಗ್ರಹ ಇರುವ ಸಕ್ಕರೆಯನ್ನು ರಫ್ತು ಮಾಡಲು ಈವರೆಗೆ ಅನುಮತಿ ನೀಡಿಲ್ಲ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್ ತಿಳಿಸಿದರು.

ಗುರುವಾರ ನಗರದಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಅಧ್ಯಯನ ಸಂಸ್ಥೆಯ ಆಡಳಿತ ಮಂಡಳಿಯ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ 10,900 ಕೋಟಿ ರೂ. ಬೆಲೆಯ ಕಬ್ಬು ಬೆಳೆಯಲಾಗಿದೆ. 10,760 ಕೋಟಿ ರೂ.ಗಳು ರೈತರಿಗೆ ಬಿಲ್ ಪಾವತಿಸಲಾಗಿದ್ದು ಒಂದು ಪ್ರತಿಶತ ಮಾತ್ರ ಕಬ್ಬಿನ ಹಣ ಪಾವತಿಸುವುದು ಉಳಿದಿದೆ ಎಂದರು.

ರೈತರು ಮಿತಿಮೀರಿ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಭೂಮಿಯ ಜೀವಸತ್ವ ಹಾಳಾಗುತ್ತಿರುವುದರ ಜತೆಗೆ ರೈತರ ಆರ್ಥಿಕತೆಯ ಮೇಲೂ ಪೆಟ್ಟು ಬೀಳುತ್ತಿದೆ. ಆದುದರಿಂದ, ರೈತರು ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಿ ಕೃಷಿ ಕೈಗೊಳ್ಳಬೇಕು ಎಂದು ರೈತರಿಗೆ ಅವರು ಸಲಹೆ ನೀಡಿದರು.

ರೈತರು ಹೊಸ ಹೊಸ ತಳಿಗಳನ್ನು ಉತ್ಪಾದನೆ ಮಾಡಬೇಕು. ಕಡಿಮೆ ವೆಚ್ಚದಲ್ಲಿ ಕಬ್ಬು ಬೆಳೆಯುವುದನ್ನು ಕಲಿಯಬೇಕು. ಬೆಳೆಯುವ ಕಬ್ಬಿಗೆ ಇಳುವರಿ ಹೆಚ್ಚು ಆಗಬೇಕು. ಬೆಳೆಯುವ ಕಬ್ಬುಗಳಿಂದ ಹೆಚ್ಚು ಸಕ್ಕರೆ ಉತ್ಪಾದನೆ ಮಾಡಬೇಕು ಎಂಬುದು ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯ ಉದ್ದೇಶ ಆಗಿದೆ ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಇರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಈ ಭಾಗದ ಹವಾಮಾನಕ್ಕೆ ಸಂಬಂಧಿಸಿದಂತೆ ಹೊಸ ಹೊಸ ತಳಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಸಕ್ಕರೆ ಉತ್ಪಾದನೆಯಲ್ಲಿ ಸಿಂಹಪಾಲು ಬೆಳಗಾವಿ ಜಿಲ್ಲೆ ಹೊಂದಿದೆ. ಹಾಗಾಗಿ ಸಂಶೋಧನೆಗಾಗಿ ಜಾಡಶಾಹಾಪೂರದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಕಬ್ಬು ಬೆಳೆಗಾರರು ಹಾಗೂ ಅಡಿಕೆ ಬೆಳೆಗಾರರಿಗೆ ಯಾವುದೆ ತೊಂದರೆ ಆಗಿಲ್ಲ. ಆದರೆ ಇನ್ನುಳಿದ ಬೆಳೆಗಾರರು ತಮ್ಮ ಜೀವನದ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದರು.

ನಕಲಿ ಕಾರ್ಮಿಕ ಕಾರ್ಡ್ ಗೆ ಕಡಿವಾಣ: ನಿಜವಾದ ಕಾರ್ಮಿಕರ ಬಗ್ಗೆ ಪರಿಶೀಲನೆ ಮಾಡಿ ಬೇರೆ ರೀತಿಯಲ್ಲಿ ಕಾರ್ಮಿಕ ಕಾರ್ಡ್ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಕಾರ್ಮಿಕ ಕಾರ್ಡುಗಳ ದುರುಪಯೋಗ ಆಗುವುದರಿಂದ ಅರ್ಹ ಕಾರ್ಮಿಕರಿಗೆ ಮೋಸ ಮಾಡಿದಂತೆ ಆಗುತ್ತದೆ. ಇದರಿಂದಾಗಿ ಕಾರ್ಮಿಕರ ಹಿತಾಸಕ್ತಿ ರಕ್ಷಣೆ ಮಾಡಲು ಆಗುವುದಿಲ್ಲ. ಕಾರ್ಮಿಕರ ಕಾರ್ಡ್ ಎಂಬುವುದು ದೊಡ್ಡ ಉದ್ಯೋಗ ಆಗಿದೆ. ಅದಕ್ಕಾಗಿ ನಕಲಿ ಕಾರ್ಮಿಕರ ಕಾರ್ಡು ಮಾಡುವ ಜಾಲ ತಡೆಯಲು ವ್ಯವಸ್ಥಿತ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಅವರು ಹೇಳಿದರು.

ಕಾರ್ಮಿಕರಿಗೆ ಶಕ್ತಿ ಕೊಡುವ ನಿಟ್ಟಿನಲ್ಲಿ ಹಾಗೂ ಕಾರ್ಮಿಕರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಕೆಲಸ ಆಗಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಪರಿಹಾರ ಧನದ ರೂಪದಲ್ಲಿ ಕಾರ್ಮಿಕರಿಗೆ 5000 ರೂಪಾಯಿ ಘೋಷಣೆ ಮಾಡಿದಾಗ ಹಾವೇರಿ ಜಿಲ್ಲೆ ಒಂದರಲ್ಲಿ 30 ಸಾವಿರ ಕಾರ್ಮಿಕರು ಕಾರ್ಮಿಕ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯದ ಅನೇಕ ಕಡೆಗಳಲ್ಲಿ ನಕಲಿ ಕಾರ್ಮಿಕರು ಉದ್ಭವಿಸಲು ಆರಂಭಿಸಿದ್ದಾರೆ ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದರು.

ಕಾರ್ಮಿಕ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಬೇಕು ಎಂದು ಅನೇಕ ಹೊಸ ಹೊಸ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತಿದ್ದು, ಕಾರ್ಮಿಕರ ಭಾವನೆಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾರ್ಡು ನವೀಕರಿಸದಿದ್ದರೂ ಪರಿಹಾರ ಧನ ನೀಡುತ್ತೆವೆ. ಆದರೆ ಪರಿಹಾರ ಧನ ಘೋಷಣೆ ಮಾಡಿದ ನಂತರದಲ್ಲಿ ಕಾರ್ಮಿಕ ಕಾರ್ಡು ಮಾಡಿಸಿದವರಿಗೆ ಪರಿಹಾರ ದೊರೆಯುವುದಿಲ್ಲ. ಕಾರ್ಮಿಕರ ಕಾರ್ಡು ನಿಜವಾದ ಕಾರ್ಮಿಕರಿಗೆ ಸಿಗಬೇಕು ಎಂಬುವುದೆ ಕಾರ್ಮಿಕ ಇಲಾಖೆಯ ಮೂಲಭೂತ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಈ ವೆಳೆ ಸಕ್ಕರೆ ಇಲಾಖೆಯ ಆಯುಕ್ತ ಅಕ್ರಮ್ ಪಾಷ, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಆರ್.ಬಿ.ಖಾಂಡಗಾವೆ, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್ ಶಿಂದಿಹಟ್ಟಿ, ಆರ್.ಸಿ.ಯು. ಕುಲಪತಿ ಡಾ.ರಾಮಚಂದ್ರ ಗೌಡ, ಚುನಾಯಿತ ಸದಸ್ಯ ಅಶೋಕ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News