ರೈತ ವಿರೋಧಿ ಸುಗ್ರೀವಾಜ್ಞೆ ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘದಿಂದ ಸತ್ಯಾಗ್ರಹ: ಕೋಡಿಹಳ್ಳಿ ಚಂದ್ರಶೇಖರ್

Update: 2020-08-27 17:33 GMT

ಬೆಂಗಳೂರು, ಆ.27: ರಾಜ್ಯ ವಿಧಾನಸಭಾ ಅಧಿವೇಶನ ಸೆ.21ರಿಂದ ಆರಂಭವಾಗಲಿದ್ದು, ಅಂದು ಅಧಿವೇಶನದಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ರೈತನ ಬದುಕನ್ನು ನಾಶ ಪಡಿಸುವಂತಹ ತಿದ್ದುಪಡಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕೆಂದು ಮೌರ್ಯ ಹೋಟೆಲ್ ಸರ್ಕಲ್, ಮಹಾತ್ಮಗಾಂಧಿ ಪ್ರತಿಮೆಯ ಮುಂದೆ ಅಧಿವೇಶನ ಮುಕ್ತಾಯದವರೆಗೆ ಅಹೋರಾತ್ರಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯಿಂದ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಭಾರತ ಸರಕಾರವು ದೇಶದಲ್ಲಿ ಕೊರೋನ ವೈರಸ್‍ನಿಂದ ಸಾವು ನೋವುಗಳು ನಡೆಯುತ್ತಿದ್ದಾಗ, ಗಡಿಯಲ್ಲಿ ಚೀನಾ ದೇಶವು ನಮ್ಮ ಸೈನಿಕರ ಮೇಲೆ ಹಲ್ಲೆ ಮಾಡಿ ನಮ್ಮ ಸೈನಿಕರನ್ನು ಕೊಂದ ಸಂದರ್ಭದಲ್ಲಿ ಇಡೀ ದೇಶದ ಜನರ ಚಿತ್ತ ಸಾವು ತರುತ್ತಿರುವ ಕೊರೋನ ಕಡೆ ಮತ್ತು ಗಡಿ ಭದ್ರತೆ ಕಡೆ ಚಿಂತಿಸುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ, ಸುಗ್ರೀವಾಜ್ಞೆಯನ್ನು ಜಾರಿಗೊಳಿಸುತ್ತಿರುವ ಉದ್ದೇವಾದರು ಏನು? ರಾಜ್ಯ ಸರಕಾರಗಳ ಅಧಿಕಾರದಲ್ಲಿ ಇರುವ ಕಾಯ್ದೆಯನ್ನು ತಿದ್ದುಪಡಿಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವಂತ ತುರ್ತು ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತ ಸರಕಾರದ ನಿರ್ದೇಶನದಂತೆ ರಾಜ್ಯ ಸರಕಾರದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿದ್ದಾರೆ. ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಯ ಮೂಲಕ ಸುಗ್ರೀವಾಜ್ಞೆ ಜಾರಿಗೊಂಡಿದೆ. ಹಾಗೂ ವಿದ್ಯುತ್ ಕಾಯ್ದೆ ಮತ್ತು ಅಗತ್ಯ ವಸ್ತುಗಳ ಕಾಯ್ದೆ ಸುಗ್ರೀವಾಜ್ಞೆಯ ಮೂಲಕ ಜಾರಿಗೊಂಡಿದೆ. ಇದಲ್ಲದೆ ಕಾರ್ಮಿಕರ ಕಾಯ್ದೆಗಳು ಜಾರಿಗೊಂಡಿವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಹಳ ಪ್ರಮುಖವಾಗಿ ಕೃಷಿ ವಲಯವನ್ನು ಖಾಸಗೀಕರಣಗೊಳಿಸುವ ದೃಷ್ಟಿಯಲ್ಲಿ ಈ ಕಾಯ್ದೆಗಳನ್ನು ತರಾತುರಿಯಲ್ಲಿ ಜಾರಿಗೆ ತಂದು ಕಾರ್ಪೋರೇಟ್ ಕಂಪನಿಗಳಿಗೆ ರತ್ನಗಂಬಳಿಯನ್ನು ಹಾಕಿ ಪರಂಪರಾಗತವಾಗಿ ಕೃಷಿಯೇ ನನ್ನ ಬದುಕು, ನನ್ನ ಸಂಸ್ಕೃತಿ, ನನ್ನ ಜೀವನ ಎಂದು ನಂಬಿದ ರೈತನನ್ನು ಕೃಷಿಯಿಂದ ಹೊರಹಾಕುವ ದೃಷಿಯಿಂದ ಈ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರೈತನ ಭೂಮಿಗೆ ಹೆಚ್ಚು ಬೆಲೆ ತಂದುಕೊಡುವಲ್ಲಿ ನಮ್ಮ ಸರಕಾರ ಮುಂದಾಗಿದೆ ಎಂಬ ಘೋಷಣೆ ಮಾಡುತ್ತಿರುವ ಸರಕಾರ, ರೈತ ಮತ್ತು ಭೂಮಿಯನ್ನು ಪರಸ್ಪರ ದೂರಮಾಡಿ ರೈತರನ್ನು ನಗರಗಳಿಗೆ ವಲಸಿಗನನ್ನಾಗಿ ಮಾಡಿ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಹಸ್ತಾಂತರ ಕಾರ್ಯಕ್ರಮಕ್ಕೆ ಮುಂದಾಗಿರುವುದು ದುರಂತವೇ ಸರಿ ಎಂದು ಅವರು ಹೇಳಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸುವಾಗ ‘ನನ್ನದು ರೈತ ಪರ ಸರಕಾರ’, ‘ನಾನು ರೈತರ ಕಷ್ಟಗಳನ್ನು ದೂರಮಾಡುತ್ತೇನೆ’, ‘ನಾನು ರೈತರ ನೆಮ್ಮದಿಯ ಬದುಕಿಗೆ ಸಹಾಯ ಮಾಡುತ್ತೇನೆ’ ಎಂದು ಹೇಳುತ್ತ ಅಧಿಕಾರ ಸ್ವೀಕರಿಸಿದರು. ಈಗ ಅವರು ಮಾಡಿರುವುದಾದರೂ ಏನು? ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

ಎಪಿಎಂಪಿ ಕಾಯ್ದೆಗೆ ತಿದ್ದುಪಡಿ ತಂದು, ಕಾರ್ಪೋರೇಟ್ ಕಂಪನಿಗಳಿಗೆ ಎಪಿಎಂಸಿ ಎಲ್ಲ ಕಾಯ್ದೆಗಳಿಂದ ಹೊರತುಪಡಿಸಲಾಗಿದೆ. ಮತ್ತು ಸ್ವತಃ ಖಾಸಗಿ ಮಾರುಕಟ್ಟೆಯನ್ನು ಹೊಂದಲು ಅನುಮತಿಯನ್ನು ನೀಡಲಾಗಿದೆ. ಈಗ ಎಪಿಎಂಸಿ ವ್ಯಾಪ್ತಿಯಲ್ಲಿ ಬರುವ ಖರೀದಿದಾರರಿಗೆ ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ಇದರಿಂದ ಎಪಿಎಂಸಿಗೆ ಬರುವ ತೆರಿಗೆ ಹಣವೂ ಇಲ್ಲ. ಎಪಿಎಂಸಿಯಿಂದ ಕಾಯ್ದೆಗಳು ಕೂಡ ಬದಲಾಗಿದೆ. ಇದರಿಂದಾಗಿ ರೈತನ ಮಾರುಕಟ್ಟೆಯನ್ನು ನಾಶಪಡಿಸಿ ಕಾರ್ಪೋರೇಟ್ಗಳಿಗೆ ಅವಕಾಶ ಕಲ್ಪಿಸಿದಂತಾಯಿತು ಎಂದು ಅವರು ದೂರಿದ್ದಾರೆ.

ಸೆ.21ರಿಂದ ಅಧಿವೇಶ ಪ್ರಾರಂಭಗೊಳ್ಳಲಿದ್ದು, ಈ ನಾಡಿನ ರೈತರ ಮಕ್ಕಳಾದ ಎಲ್ಲ ಶಾಸಕ ಮಿತ್ರರು ಒಕ್ಕೊರಳಿನಿಂದ ಈ ಕಾಯ್ದೆಯನ್ನು ಹಿಂಪಡೆಯುವಂತೆ ಅಧಿವೇಶನದಲ್ಲಿ ಒತ್ತಾಯಮಾಡಬೇಕು. ಅಧಿವೇಶ ಪ್ರಾರಂಭದ ದಿನದಿಂದ ಮುಗಿಯುವವರೆಗೆ ರೈತರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಲಾಗುವುದು. ಈ ಸತ್ಯಾಗ್ರಹದಲ್ಲಿ ಪಕ್ಷ ಬೇಧಗಳನ್ನು ಮರೆತು ಎಲ್ಲ ರಾಜಕೀಯ ಪಕ್ಷಗಳು ಬೆಂಬಲಿಸಬೇಕು. ರೈತನ ಬಗ್ಗೆ ಸಹಾನುಭೂತಿ ಹೊಂದಿರುವ ಎಲ್ಲ ಸಂಘ ಸಂಸ್ಥೆಗಳು, ಸಂಘಟನೆಗಳು, ಗಣ್ಯ ವ್ಯಕ್ತಿಗಳು ಹೋರಾಟ ಬೆಂಬಲಿಸಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News