ಹುಲಿ ಹತ್ಯೆ ಆರೋಪ: ಓರ್ವನ ಬಂಧನ, ಮೂವರು ಪರಾರಿ

Update: 2020-08-27 17:47 GMT

ಮಡಿಕೇರಿ, ಆ.27: ಕೊಡಗು-ಹುಣಸೂರು ಅರಣ್ಯ ಗಡಿ ಭಾಗದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಲ್ಲಹಳ್ಳ ಅರಣ್ಯದಲ್ಲಿ ಹುಲಿಯನ್ನು ಹತ್ಯೆ ಮಾಡಿದ ಆರೋಪದಡಿ ಓರ್ವನನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪರಾರಿಯಾಗಿರುವ ಮೂವರಿಗಾಗಿ ಬಲೆ ಬೀಸಿದ್ದಾರೆ.

ಸಂತೋಷ್ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದು, ಹೆಚ್.ರಂಜು, ಕೆ.ಶಶಿ ಹಾಗೂ ಕೆ.ಶರಣು ಎಂಬುವವರುಗಳೇ ನಾಪತ್ತೆಯಾದವರು.

ರಾತ್ರಿ ವೇಳೆ ಹುಲಿಗೆ ಗುಂಡು ಹೊಡೆದು ಹತ್ಯೆ ಮಾಡಲಾಗಿದ್ದು, ಅಧಿಕಾರಿಗಳು ಮೃತದೇಹವನ್ನು ಪರಿಶೀಲಿಸಿದಾಗ ಹುಲಿಯ ಉಗುರಿಗಾಗಿ ನಾಲ್ಕು ಕಾಲುಗಳನ್ನೇ ಕತ್ತರಿಸಿ ಕೊಂಡೊಯ್ದಿರುವುದು ಪತ್ತೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಅಧಿಕಾರಿಗಳು ಅರಣ್ಯ ಇಲಾಖೆಯ ಶ್ವಾನದಳದ 'ರಾಣಾ'ನ ಸಹಾಯದಿಂದ ಆರೋಪಿಗಳ ಸುಳಿವು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೋಷ್ ಮನೆಗೆ ಶ್ವಾನ ತೆರಳಿದಾಗ 1.5 ಕೆ.ಜಿ. ಜಿಂಕೆ ಮಾಂಸ ಇರುವುದು ಕಂಡು ಬಂದಿದೆ. ತಕ್ಷಣ ಆತನನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದರು. ಇದೇ ವೇಳೆ ಮೂವರು ಆರೋಪಿಗಳಾದ ಹೆಚ್.ರಂಜು, ಕೆ.ಶಶಿ ಹಾಗೂ ಕೆ.ಶರಣು ಅವರುಗಳ ಮನೆಗಳಿಗೂ ತೆರಳಿದ ಶ್ವಾನ ರಾಣಾ ಮನೆಯಲ್ಲಿ ಬಚ್ಚಿಟ್ಟಿದ್ದ ಹುಲಿಯ 4 ಕಾಲುಗಳು, ಬಂದೂಕಿನ ಕಾಡತೂಸು(ಗುಂಡುಗಳು)ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. 
ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗೆ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಬಲೆ ಬೀಸಿದ್ದಾರೆ. ಶ್ವಾನ “ರಾಣಾ”ನ ಚಾಣಕ್ಷತೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಅಜಯ್ ಮಿಶ್ರಾ, ಪ್ರಾಜೆಕ್ಟ್ ಟೈಗರ್ ಎಸಿಸಿಎಫ್ ಜಗತ್ ರಾಮ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಸೇರಿದಂತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಆರ್ಆರ್ಟಿ ತಂಡದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News