ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ವಿಫಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

Update: 2020-08-28 11:31 GMT

ಬೆಂಗಳೂರು, ಆ.28: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಬೇಹುಗಾರಿಕೆ ಪಡೆ ಕೂಡ ಸಂಪೂರ್ಣ ವೈಫಲ್ಯ ಅನುಭವಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಜೆ ಹಳ್ಳಿ, ಕೆ.ಜಿ ಹಳ್ಳಿ, ಬೆಳಗಾವಿ ಘಟನೆ ಸೇರಿದಂತೆ, ಎಲ್ಲದರಲ್ಲೂ ಸರಕಾರ ಸಂಪೂರ್ಣ ವಿಫಲವಾಗಿದೆ. ಇದರ ಬಗ್ಗೆ ರಾಜ್ಯ ಸರಕಾರ ಹೆಚ್ಚಿನ ಗಮನಹರಿಸಬೇಕು. ಶಿವಾಜಿ, ರಾಯಣ್ಣ ಇಬ್ಬರೂ ಮಹಾಪುರುಷರೇ. ಆದರೆ, ಅನಗತ್ಯವಾಗಿ ಅಲ್ಲಿ ಈ ವಿಷಯದ ಕುರಿತು ಗೊಂದಲ ಸೃಷ್ಟಿಯಾಗಿದ್ದು, ಅದನ್ನು ಸರಕಾರ ನಿಯಂತ್ರಿಸಲು ಮುಂದಾಗಿಲ್ಲ ಎಂದು ದೂರಿದ್ದಾರೆ.

ಬೆಳಗಾವಿಯಲ್ಲಿ ಪೊಲೀಸರ ಲಾಠಿ ಚಾರ್ಜ್ ವಿಚಾರವಾಗಿ ಮಾತನಾಡಿ, ಸರಕಾರ ಈ ಕೂಡಲೇ  ಶಾಂತಿಮೂಡಿಸುವ ಕೆಲಸ ಮಾಡಬೇಕು. ಮೊದಲೇ ಎರಡು ಸಮುದಾಯವನ್ನು ಕರೆಸಿ ಮಾತನಾಡಬಹುದಿತ್ತು. ಗೋಲಿಬಾರ್ ಜರುಗುತ್ತದೆ ಅಂದರೆ ಇಂಟೆಲಿಜೆನ್ಸ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ವಿಜಯಪುರ ದಲಿತ ಯುವಕನ ಹತ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, 21ನೇ ಶತಮಾನ ಬಂದ್ರೂ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ. ಅದನ್ನ ನಿಯಂತ್ರಿಸುವ ಕೆಲಸ ಆಗಬೇಕು. ಮೊದಲು ತಪ್ಪಿತಸ್ಥರನ್ನ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಖಂಡ್ರೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News