ದೇವಾಲಯದ ಕಟ್ಟೆ ಮೇಲೆ ಸರಿಸಮನಾಗಿ ಕುಳಿತುಕೊಂಡಿದ್ದಕ್ಕೆ ಕೊಲೆ: ಎಸ್ಪಿ ಅನುಪಮ್ ಅಗರವಾಲ್

Update: 2020-08-28 14:29 GMT

ವಿಜಯಪುರ, ಆ. 28: ಜಿಲ್ಲೆಯ ಸಿಂದಗಿ ಸಮೀಪದ ಬೂದಿಗಾಳ ಪಿ.ಎಚ್.ಗ್ರಾಮದಲ್ಲಿ ಪರಿಶಿಷ್ಟ ಜಾತಿ(ಎಸ್ಸಿ)ಯ ಯುವಕನ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ದೇವಾಲಯ ಕಟ್ಟೆ ಮೇಲೆ ಕುಳಿತ ಕಾರಣಕ್ಕಾಗಿ ಆತನನ್ನು ಹತ್ಯೆಗೈದಿದ್ದಾರೆ ಎನ್ನುವ ಮಾಹಿತಿ ಆರೋಪಿಗಳು ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಘಟನೆ ಸಂಬಂಧ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಪರಿಶಿಷ್ಟ ಜಾತಿಯ ಯುವ ಮುಖಂಡ ಅನಿಲ ಇಂಗಳಗಿ (28) ಕೊಲೆ ಪ್ರಕರಣದ ತನಿಖೆ ಮುಂದುವರಿದಿದ್ದು, ಈಗಾಗಲೇ ಪಿ.ಎಚ್.ಗ್ರಾಮದ ಸಿದ್ದು ಹಾಗೂ ಸುಭಾಸ ಬಿರಾದಾರ ಎಂಬುವರನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ ಎಂದು ವಿವರ ನೀಡಿದರು.

ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯ ಮೇಲೆ ಕೆಲವು ದಿನಗಳ ಹಿಂದೆ ಪರಿಶಿಷ್ಟ ಜಾತಿಯ ಯುವ ಮುಖಂಡ ಅನಿಲ ಇಂಗಳಗಿ ತಮಗೆ ಸರಿಸಮನಾಗಿ ಕುಳಿತಿದ್ದಕ್ಕೆ ಬಂಧಿತ ಆರೋಪಿಗಳು ಅಸಮಾಧಾನ ಹೊಂದಿದ್ದರು. ಇದೇ ವಿಚಾರವಾಗಿ ಆರೋಪಿಗಳು, ಅನಿಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದಾರೆ ಎನ್ನುವ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಸಿಂದಗಿ ಠಾಣಾ ಪೊಲೀಸರು ಮೃತ ಯುವಕನ ತಂದೆಯಿಂದ ದೂರು ದಾಖಲಿಸಿಕೊಂಡಿದ್ದರು. ಇದರ ಅನ್ವಯ ಐಪಿಸಿ ಸೆಕ್ಷನ್ 302 ಹಾಗೂ ಇತರೆ ಕಾಯ್ದೆಗಳಡಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ. ಅದೇ ರೀತಿ, ಹಲವರ ಹೆಸರನ್ನು ದೂರಿನಲ್ಲಿ ಅನಿಲ್ ತಂದೆ ಪ್ರಸ್ತಾಪಿಸಿದ್ದಾರೆಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಖಂಡನೆ: ದೇವಾಲಯದ ಕಟ್ಟೆ ಮೇಲೆ ಸರಿಸಮನಾಗಿ ಕುಳಿತುಕೊಂಡಿದಕ್ಕೆ ಪರಿಶಿಷ್ಟ ಜಾತಿಯ(ಎಸ್ಸಿ) ಯುವಕನ ಹತ್ಯೆ ಪ್ರಕರಣಕ್ಕೆ ರಾಜ್ಯದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಚಿಂತಕರು, ದಲಿತ ಹೋರಾಟಗಾರರು ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಬಾಯಲ್ಲಿ ಸಮಾನತೆಯ ಮಂತ್ರ, ಆಚರಣೆಯಲ್ಲಿ ಅಸಮಾನತೆಯ ಕುತಂತ್ರ

ವಿಜಯಪುರದ ಸಿಂದಗಿಯಲ್ಲಿ ನಡೆದಿರುವ ದಲಿತ ಯುವಕನ ಹತ್ಯೆ ಹೇಯವಾದುದು ಮತ್ತು ಮನುಷ್ಯರೆಲ್ಲರೂ ತಲೆತಗ್ಗಿಸುವಂತಹದ್ದು. ಮುಖ್ಯಮಂತ್ರಿ ಯಡಿಯೂರಪ್ಪನವರು ತಕ್ಷಣ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಚಾಲನೆ ನೀಡಬೇಕು. ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದರೆ ಮುಖವಾಡ ಬಯಲು ಮಾಡಲು ಬೀದಿಗೆ ಇಳಿಯಬೇಕಾಗುತ್ತದೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಮೀಸಲಾತಿಯನ್ನು ವಿರೋಧಿಸುವ, ದಲಿತರನ್ನು ಕೀಳಾಗಿ ಕಾಣುವ ನಾಯಕರಿಗೆ ಬಿಜೆಪಿ ನೀಡುತ್ತಿರುವ ಬೆಂಬಲವೇ ಇಂತಹ ಕೊಲೆಗಡುಕರು ನಿರ್ಭಯವಾಗಿ ಈ ರೀತಿಯ ದುಷ್ಕೃತ್ಯಕ್ಕೆ ಇಳಿಯಲು ಕಾರಣ. ಬಾಯಲ್ಲಿ ಸಮಾನತೆಯ ಮಂತ್ರ, ಆಚರಣೆಯಲ್ಲಿ ಅಸಮಾನತೆಯ ಕುತಂತ್ರ'

-ಸಿದ್ದರಾಮಯ್ಯ, ವಿಪಕ್ಷ ನಾಯಕ

ಬಿಜೆಪಿ ಅಧಿಕಾರದಲ್ಲಿರುವ ವಿಜಯಪುರ ಜಿಲ್ಲೆಯೊಂದರಲ್ಲೆ ದಲಿತ ಹೆಣ್ಣು ಮಗು ಧಾನಮ್ಮಳ ಅತ್ಯಾಚಾರ, ಕೊಲೆ ನಡೆಯಿತು. ಆ ಬಳಿಕ ಬೈಕ್ ಮುಟ್ಟಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಯಿತು. ಇದರ ಬೆನ್ನಲ್ಲೆ ಯುವ ಮುಖಂಡನ ಹತ್ಯೆ ನಡೆದಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸರಕಾರ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ.

-ಗೋಪಾಲಕೃಷ್ಣ ಹರಳಹಳ್ಳಿ, ದಲಿತ ಹಕ್ಕುಗಳ ಸಮಿತಿ ಸಂಚಾಲಕ

ಬುದ್ಧ, ಬಸವ, ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿಗಳ ಮೌಲ್ಯಗಳು ನೆಲೆಗೊಂಡಿರುವ ಈ ನಾಡಿನಲ್ಲಿ ಈಗಲೂ ಮೇಲ್ಜಾತಿ ಶ್ರೇಷ್ಠತೆಯ ವ್ಯಸನವು ದಲಿತರನ್ನು ಹತ್ಯೆ ಮಾಡಿರುವುದು ಖಂಡನೀಯ. ಇಂತಹ ಕ್ರೂರ ವಾತಾವರಣ ನಿರ್ಮಾಣ ಮಾಡುತ್ತಿರುವ ಕೋಮು ಶಕ್ತಿಗಳ ವಿರುದ್ಧ ಸರಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು'

-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ

ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನಲ್ಲಿ ದೇವಸ್ಥಾನದಲ್ಲಿ ಸಮಾನವಾಗಿ ಕುಳಿತ ಕಾರಣಕ್ಕೆ ಹತ್ಯೆ ಮಾಡಿದ ಅಪರಾಧಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯಾಚರಣೆ ಅಕ್ಷಮ್ಯ ಮತ್ತು ಹೇಯ ಕೃತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಸಂವಿಧಾನಾತ್ಮಕ ಕಾನೂನುಗಳು ಜಾರಿಯಲ್ಲಿಲ್ಲ ಎಂಬ ಬಲಹೀನತೆಯನ್ನು ಮತ್ತೊಮ್ಮೆ ಈ ಕೃತ್ಯ ಎತ್ತಿ ತೋರಿಸಿದೆ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಬೇಕು.

-ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News