ರಾಯಣ್ಣ ಪ್ರತಿಮೆ ಸ್ಥಾಪಿಸಿದ ಕನ್ನಡಿಗರ ಮೇಲೆ ಮೊಕದ್ದಮೆ ಖಂಡನೀಯ: ಕನ್ನಡ ಗೆಳೆಯರ ಬಳಗ

Update: 2020-08-28 17:44 GMT

ಬೆಂಗಳೂರು, ಆ.28: ಬೆಳಗಾವಿಯ ಪೀರನವಾಡಿ ಗ್ರಾಮದ ಮುಖ್ಯವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಿದ ಕನ್ನಡ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಕನ್ನಡ ಗೆಳೆಯರ ಬಳಗ ಖಂಡಿಸಿದೆ.

ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮನಾದ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಸ್ಥಾಪನೆಗೆ ರಾಜ್ಯ ಸರಕಾರ ಮೀನಾ ಮೇಷ ಎಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಕಾರ್ಯಕರ್ತರು ಪ್ರತಿಮೆ ಸ್ವಯಂಪ್ರೇರಿತವಾಗಿ ಪ್ರತಿಮೆ ಸ್ಥಾಪಿಸಿದ್ದಾರೆ. ಇದಕ್ಕೆ ವಿರೋಧಿ ವ್ಯಕ್ತಪಡಿಸಿರುವ ಎಂಇಎಸ್ ಪುಂಡರು ದಾಂಧಲೆ ನಡೆಸಿದ್ದಾರೆ. ಹಾಗೂ ಪ್ರತಿಮೆ ಸ್ಥಾಪನೆಗೆ ಕಾರಣರಾದ 20 ಕನ್ನಡಿಗರ ಮೇಲೆ ಸರಕಾರ ಮೊಕದ್ದಮೆ ಹೂಡಿರುವುದು ಖಂಡನೀಯ.

ರಾಯಣ್ಣನ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸಿ ಮಹಾರಾಷ್ಟ್ರ ಏಕಿಕರಣ ಸಮಿತಿಯ ಕಾರ್ಯಕರ್ತರು ಕನ್ನಡಿಗರ ಮೇಲೆ ಕಲ್ಲು ತೂರಿ, ಚಪ್ಪಲಿ ಎಸೆದು ಹಲ್ಲೆ ನಡೆಸಿದ್ದಾರೆ. ಗಲಭೆ ಮಾಡುವವರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಎಂಇಎಸ್‍ನವರ ಮೇಲೆ ಲಾಠಿ ಪ್ರಹಾರ ನಡೆಸದಂತೆ ಸೂಚಿಸಿದ್ದಾರೆ. ಇದು ಕನ್ನಡಿಗರಿಗೆ ಎಸೆದ ದ್ರೋಹವಾಗಿದೆ.

ಕನ್ನಡನಾಡಿನ ವೀರಪುತ್ರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗದಿದ್ದರೆ ಇನ್ನೆಲ್ಲಿ ಸ್ಥಾಪಿಸಲಾದೀತು ಎಂಬುದನ್ನು ನಮ್ಮ ನಾಯಕರು ಯೋಚಿಸಬೇಕು. ಬೆಳಗಾವಿ ಜಿಲ್ಲೆಯ ಶಾಸಕರು, ಸಂಸದರು ಮರಾಠಿಗರ ಮತಕ್ಕಾಗಿ ಕನ್ನಡದ ಹಿತ ಕಡೆಗಣಿಸುವುದನ್ನು ಸಹಿಸಲಾಗದು ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಪ್ರಕಟನೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಸರ್ಕಾರವೂ ಈ ವಿಚಾರದಲ್ಲಿ ಕಣ್ಣುಮುಚ್ಚಿ ಕೂತಿದೆಯೇ ಎಂಬ ಅನುಮಾನ ಬರುತ್ತದೆ. ಕನ್ನಡ ಸಂಘಟನೆಗಳು ಮರಾಠಿಗರ ಪುಂಡಾಟಿಕೆ ಸರಿಯಾದ ಉತ್ತರ ನೀಡಲು ಮುಂದಾಗಬೇಕು ಮತ್ತು ಮರಾಠಿಗರ ಪರವಾಗಿರುವ ಜನಪ್ರತಿನಿಧಿಗಳಿಗೆ ಸೂಕ್ತ ಪಾಠ ಕಲಿಸಬೇಕೆಂದು ಕನ್ನಡ ಗೆಳೆಯರ ಬಳಗವು ಮನವಿ ಮಾಡುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News