ಜ್ಯಬಿಲಿಯಂಟ್‍ನವರು ಕೊಟ್ಟ ಆಹಾರ ಕಿಟ್‍ನಲ್ಲೂ ಭ್ರಷ್ಟಾಚಾರ: ಶಾಸಕ ಹರ್ಷವರ್ಧನ್ ವಿರುದ್ಧ ಧ್ರುವನಾರಾಯಣ್ ಆರೋಪ

Update: 2020-08-28 17:57 GMT

ಮೈಸೂರು,ಆ.28: ಕೊರೋನ ಹರಡಲು ಕಾರಣರಾದರು ಎಂದು ಆರೋಪಿಸಿ ದೆಹಲಿಯ ತಬ್ಲಿಗಿ ಜಮಾತ್ ಸಂಘಟನೆ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸರ್ಕಾರ ನಂಜನಗೂಡಿನ ಜ್ಯಬಿಲಿಯಂಟ್ ಕಂಪನಿಯ ವಿರುದ್ಧ ಏಕೆ ಪ್ರಕರಣ ದಾಖಲಿಸಲಿಲ್ಲ? ತನಿಖೆಯಾಗಬೇಕು ಎಂದು ಒತ್ತಾಯಿಸುತಿದ್ದ ಸ್ಥಳೀಯ ಶಾಸಕ ಹರ್ಷವರ್ಧನ್ ಜ್ಯಬಿಲಿಯಂಟ್‍ನವರು 50 ಸಾವಿರ ಆಹಾರ ಕಿಟ್ ಕೊಟ್ಟ ನಂತರ ಬಾಯಿ ಮುಚ್ಚಿಕೊಂಡು ಇದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ವರುಣಾ ವಿಧಾನಸಭಾ ಕ್ಷೇತ್ರದ ಆರೋಗ್ಯ ಹಸ್ತ ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಮಾಧ್ಯಮದವರೊಂದಿಗ ಮಾತನಾಡಿದ ಅವರು, ಕೊರೋನ ಹರಡಲು ಕಾರಣವಾಗಿದ್ದ ನಂಜನಗೂಡಿನ ಜ್ಯಬಿಲಿಯಂಟ್ ಕಂಪನಿ ವಿರುದ್ಧ ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿದ್ದ ಶಾಸಕ ಹರ್ಷವರ್ಧನ್ ಜ್ಯಬಿಲಿಯಂಟ್‍ನವರು 50 ಸಾವಿರ ಆಹಾರ ಕಿಟ್ ಕೊಟ್ಟ ನಂತರ ಬಾಯಿಮುಚ್ಚಿಕೊಂಡು ಸುಮ್ಮನಿದ್ದಾರೆ. ಜ್ಯಬಿಲಿಯಂಟ್‍ನವರು ಕೊಟ್ಟ ಆಹಾರ ಕಿಟ್‍ನಲ್ಲೂ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದರು.

ಈ ಮೊದಲು ಜ್ಯಬಿಲಿಯಂಟ್ ಕಂಪನಿ ಕೊರೋನ ಹರಡಲು ಕಾರಣವಾಗಿತ್ತು ಎಂದು ಆರೋಪಸಿ ತನಿಖೆಯಾಗುವವರೆಗೂ ಕಂಪನಿ ಪ್ರಾರಂಭಕ್ಕೆ ಬಿಡುವುದಿಲ್ಲ ಎಂದು ವೀರಾವೇಶ ತೋರಿಸಿದ್ದ ಶಾಸಕ ಹರ್ಷವರ್ಧನ್ ಜ್ಯಬಿಲಿಯಂಟ್ ಕಂಪನಿಯಿಂದ ಆಹಾರ ಕಿಟ್‍ನ ಕಿಕ್‍ಬ್ಯಾಕ್ ಬಂದ ಕೂಡಲೇ ಒಂದೂ ಮಾತನಾಡದೆ ಸುಮ್ಮನೆ ಇದ್ದಾರೆ. ಪಕ್ಷಾತೀತವಾಗಿ ಆಹಾರ ಕಿಟ್ ಹಂಚಿಕೆ ಮಾಡುತ್ತೇನೆ ಎಂದಿದ್ದ ಶಾಸಕರು ಅದರಲ್ಲೂ ಭ್ರಷ್ಟಾಚಾರ ಎಸಗಿ ಬರೀ ಬಿಜೆಪಿ ಕಾರ್ಯಕರ್ತರಿಗೆ ಹಂಚಿದ್ದಾರೆ ಎಂದು ಕಿಡಿಕಾರಿದರು.

ಕೊರೋನ ತಡೆಗಟ್ಟವುಲ್ಲಿ ರಾಜ್ಯ ಸರ್ಕಾರ ವಿಫಲ

ಕೊರೋನ ತಡೆಗಟ್ಟಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಸಂಸದ ಆರ್.ಧ್ರವನಾರಾಯಣ್ ಆರೋಪಿಸಿದರು.

ಕೆಪಿಸಿಸಿ ವತಿಯಿಂದ 25 ಸಾವಿರ ಕೊರೋನ ವಾರಿಯರ್ಸ್ ಗಳಿಂದ ಗ್ರಾಮೀಣ ಭಾಗದಲ್ಲಿ ಕೊರೋನ ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ನುರಿತ ವೈದ್ಯರಿಂದ ಪ್ರತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನ ವಾರಿಯರ್ಸ್‍ಗೆ ತರಬೇತಿ ನೀಡಲಾಗುತ್ತಿದೆ. ಅವರಿಗೆ ಆರೋಗ್ಯ ಕಿಟ್ ನೀಡುವ ಮೂಲಕ ಕೊರೋನ ತಡೆಗಟ್ಟಲು ಕ್ರಮ ವಹಿಸಲಾಗಿದೆ ಎಂದರು.

ಕೊರೋನ ವಾರಿಯರ್ಸ್ ಗೆ ಗುಂಪು ವಿಮೆ ಮಾಡಿಸಲಾಗಿದ್ದು. ಪ್ರತಿಯೊಬ್ಬರಿಗೂ ಒಂದು ಲಕ್ಷ ರೂ. ವಿಮೆಯನ್ನು ಮಾಡಿಸಲಾಗಿದೆ. ಕೆಪಿಸಿಸಿ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ 6 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕೆಪಿಸಿಸಿ ಸದಸ್ಯ ಹೆಡತಲೆ ಮಂಜುನಾಥ್, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವೀಕ್ಷಕ ಶಿವನಾಗಪ್ಪ, ಶಿವು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News