ಕೊರೋನ ಸಂಕಷ್ಟದ ನಡುವೆ ದಸರಾ ಆಚರಣೆ ಬೇಡ: ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

Update: 2020-08-28 18:00 GMT

ಮೈಸೂರು,ಆ.28: ಕೊರೋನ ವೈರಸ್ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಈ ಬಾರಿ ದಸರಾ ಆಚರಣೆ ಬೇಡ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೋನ ವೈರಸ್‍ನಿಂದ ಇಡೀ ದೇಶವೆ ತತ್ತರಿಸಿ ಹೋಗಿದೆ. ಜೊತೆಗೆ ನೆರೆಯಿಂದಲೂ ರಾಜ್ಯದ ಜನ ಸಂಕಷ್ಟ ಎದುರಿಸುತಿದ್ದಾರೆ. ಇಂತಹ ಸಂದರ್ಭದಲ್ಲಿ ದಸರಾ ಅಚರಣೆ ಬೇಡ, ಈ ಭಾಗದ ಜನರು ರೂಢಿಗತವಾಗಿ ಅಥವಾ ಸಾಂಪ್ರದಾಯಿಕವಾಗಿ ದಸರಾ ಹಬ್ಬವನ್ನು ಸ್ವತಃ ತಮ್ಮ ಮನೆಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಆದರೆ, ಸರ್ಕಾರ ದಸರಾವನ್ನು ಆಚರಿಸುವುದು ಈ ವರ್ಷ ನಿಲ್ಲಿಸಬೇಕು ಎಂದು ಹೇಳಿದರು.

ರಾಜ್ಯ ಮತ್ತು ದೇಶ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತಿದ್ದು, ಸರ್ಕಾರ ನಡೆಸಲು ಸಾಲ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದಾರೆ. ಹಾಗಿದ್ದ ಮೇಲೆ ದಸರಾ ಆಚರಣೆಗೂ ಸಾಲ ಮಾಡುತ್ತಾರೆ. ಹಾಗಾಗಿ ಈ ಬಾರಿ ದಸರಾ ಅಚರಣೆ ಬೇಡ, ದಸರಾಗೆ ಖರ್ಚು ಮಾಡುವ ದುಡ್ಡನ್ನು ನೆರೆ ಸಂಕಷ್ಟ ಎದುರಿಸಿ ಮನೆ ಮಠ ಕಳೆದುಕೊಂಡವರಿಗೆ ನೀಡಲಿ ಎಂದು ಒತ್ತಾಯಿಸಿದರು.

ಮೈಸೂರು ಜಿಲ್ಲೆಯ ಎಚ್.ಡಿ,ಕೋಟೆ, ಸರಗೂರು ಮತ್ತು ಇತರೆ ತಾಲ್ಲೂಕುಗಳಲ್ಲಿ ಈ ಮುಂಗಾರಿನಲ್ಲಿ ಬೆಳೆಯಲಾಗಿದ್ದ ಹತ್ತಿ ಫಸಲು ಇದೂವರೆಗೂ ಕಾಯಿ ಕಟ್ಟಿಲ್ಲ. ಇದರಿಂದ ರೈತರಿಗೆ ಕೋಟ್ಯಂತರ ರೂಪಾಯಿಗಳು ನಷ್ಟವಾಗುವ ಆತಂಕ ಉಂಟಾಗಿದೆ. ಹಲವಾರು ಕಂಪನಿಗಳು ಬೀಜಗಳನ್ನು ವಿತರಿಸಿದ್ದು, ಇದೂವರೆಗೆ ಹತ್ತಿ ಫಸಲು ಕಟಾವಿಗೆ ಪ್ರಾರಂಭವಾಗಬೇಕಿತ್ತು. ಆದರೆ ಗಿಡಗಳಲ್ಲಿ ಕಾಯಿ ಕಟ್ಟದೆ ಬರಿ ಸೊಪ್ಪು ಮಾತ್ರ ಇದೆ. ಈ ರೀತಿ ಲಕ್ಷಾಂತರ ಎಕರೆಯಲ್ಲಿ ಬೆಳೆಯಲಾಗಿರುವ ಹತ್ತಿ ಫಸಲು ನಷ್ಟವಾಗುವ ಎಲ್ಲ ಲಕ್ಷಣಗಳು ಇದ್ದು ಸರ್ಕಾರ ಕೂಡಲೇ ಈ ಬಗ್ಗೆ ಸಮೀಕ್ಷೆ ನಡೆಸಬೇಕು. ಸಂಬಂಧಪಟ್ಟ ಬೀಜದ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳಬೇಕು ರೈತರಿಗೆ ನಷ್ಟವನ್ನು ವೈಜ್ಞಾನಿಕ ಮಾನದಂಡದಲ್ಲಿ ತುಂಬಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಮಿಳುನಾಡು ರೈತ ಸಂಘದ ಅಧ್ಯಕ್ಷ ವಕೀಲ ಸಿ.ಗುರುಸ್ವಾಮಿ,  ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೆಟ್ಟಹಳ್ಳಿ ಚಂದ್ರೇಗೌಡ, ತಾ. ಸಂಘಟನಾ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ತಾಲ್ಲೂ ಅಧ್ಯಕ್ಷ ಪಿ.ಮರಂಕಯ್ಯ ಸೇರಿದಂತೆ ಹಲವರು ಉಪಸ್ಥಿರಿದ್ದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬರೆದಿರುವ ಪತ್ರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಕಾರಾತ್ಮಕವಾಗಿ ಸ್ಪಂಧಿಸುತ್ತಾರೆ ಎಂಬ ನಂಬಿಕೆ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಸರ್ಕಾರಿ ಸೌಮ್ಯದ ಎಲ್ಲಾ ಇಲಾಖೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತಿದ್ದಾರೆ. ಇಂತಹ ಸಂದರ್ಭದಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯುತ್ತಾರೆ ಎಂಬ ನಂಬಿಕೆ ಇಲ್ಲ. ಹಾಗಾಗಿ  ಪ್ರತಿಭಟನೆಯ ಮೂಲಕ ಪ್ರಧಾನ ಮಂತ್ರಿಗಳ ಗಮನ ಸೆಳೆಯುವ ಹೋರಾಟವನ್ನು ರೈತ ಸಂಘ ಇತರೆ ಸಂಘಟನೆಗಳೊಡಗೂಡಿ ಹಮ್ಮಿಕೊಳ್ಳಲಿದೆ

-ಬಡಗಲಪುರ ನಾಗೇಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News