ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಗೊಂದಲ: ಗ್ರಾಮಸ್ಥರ ಅಭಿಪ್ರಾಯ ಆಧರಿಸಿ ಪ್ರಸ್ತಾವ ಸಲ್ಲಿಕೆಗೆ ಸಿ.ಟಿ.ರವಿ ಸೂಚನೆ

Update: 2020-08-28 18:13 GMT

ಚಿಕ್ಕಮಗಳೂರು, ಆ.28: ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರುವ ಗ್ರಾಮಗಳ ನಕ್ಷೆಯನ್ನು ಪ್ರತೀ ಗ್ರಾಮ ಪಂಚಾಯತ್‍ಗಳಿಗೆ ಕಳಿಸಿಕೊಡಲಾಗುವುದು. ಯಾವುದನ್ನು ಸಂರಕ್ಷಿತ ಪ್ರದೇಶದಿಂದ ಹೊರಗಿಡಬೇಕು, ಯಾವುದನ್ನು ಸೇರಿಸಬೇಕು, ಭವಿಷ್ಯದ ಉಳಿವಿಗೆ ಯಾವುದನ್ನು ಸಂರಕ್ಷಣೆ ಮಾಡಬೇಕೆಂಬುದನ್ನು ಗ್ರಾಮಸ್ಥರೇ ತೀರ್ಮಾನ ಮಾಡಬೇಕು. ಗ್ರಾಮಸ್ಥರ ತೀರ್ಮಾನದ ಮೇಲೆ ಅರಣ್ಯಾಧಿಕಾರಿಗಳು ವರದಿ ತಯಾರಿಸಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕೆಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಶುಕ್ರವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆದ ಭದ್ರಾಹುಲಿ ಸಂರಕ್ಷಿತ ಪ್ರದೇಶ ಹಾಗೂ ಪರಿಸರ ಸೂಕ್ಷ್ಮವಲಯ ಕರಡು ಅಧಿಸೂಚನೆ ಹೊರಡಿಸಿರುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ಘೋಷಣೆಯಿಂದ ಗ್ರಾಮಗಳಲ್ಲಿ ಸಮುದಾಯ ಭವನ, ಫಾರಂ. 50, 53ಯಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಿಲ್ಲ, ಸ್ಮಾಶನಕ್ಕೆ ಜಾಗ ಗುರುತು ಮಾಡಿಲ್ಲ, ಶಾಲೆ, ಸರಕಾರಿ ಕಟ್ಟಡ ನಿರ್ಮಾಣಕ್ಕೆ ಜಾಗ ಮೀಸಲಿಟ್ಟಿಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಅರಣ್ಯಾಧಿಕಾರಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮಸ್ಥರ ಸಭೆ ಮಾಡುವಂತೆ ತಿಳಿಸಿದರು. 

ಸಭೆಯ ಆರಂಭದಲ್ಲಿ ಮಲ್ಲೇನಹಳ್ಳಿ ಗ್ರಾಮಸ್ಥ ದಿನೇಶ್ ಮಾತನಾಡಿ, ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ಘೋಷಣೆಗೆ ನಡೆಸಿರುವ ಸರ್ವೇ ಕಾರ್ಯ ಸಮರ್ಪಕವಾಗಿಲ್ಲ, ಕಂದಾಯ ಭೂಮಿಯನ್ನು ಸೇರಿಸಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ, ಗೋಮಾಳ, ರಸ್ತೆ, ಶಾಲೆ, ಸರಕಾರಿ ಕಟ್ಟಡ ನಿರ್ಮಾಣಕ್ಕೆ ಹಾಗೂ ಫಾರಂ 50, 53ಯಡಿಯಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಜಾಗ ನೀಡಲು ಜಮೀನು ಮೀಸಲಿರಿಸಿಲ್ಲ ಎಂದರು.

ಮೀಸಲು ಪ್ರದೇಶ ಸಂರಕ್ಷಣೆ ಒಳ್ಳೇಯ ಉದ್ದೇಶವನ್ನೇ ಹೊಂದಿದ್ದರೂ ಅರಣ್ಯ ಇಲಾಖೆ ಒಪ್ಪಿಸುವುದು ಇಷ್ಟವಿಲ್ಲ, ಇರುವ ಅರಣ್ಯವನ್ನೇ ಇಲಾಖೆ ಉಳಿಸಿಕೊಂಡಿಲ್ಲ, ಮತ್ತೆ ಅರಣ್ಯ ಇಲಾಖೆಗೆ ನೀಡುವುದು ಮೂರ್ಖತನ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಮಾತನಾಡಿದ ಐಡಿಪೀಠ ಗ್ರಾಮದ ಮಂಜು, ಐಡಿಪೀಠ ಗ್ರಾಮದ ಶಾಲೆ, ಜನವಸತಿ ಪ್ರದೇಶವನ್ನು ಯೋಜನಾ ವ್ಯಾಪ್ತಿಗೆ ಸೇರಿಸಲಾಗಿದೆ. ಇಲ್ಲಿನ ನಿವಾಸಿಗಳನ್ನು ಮುಂದಿನ ದಿನಗಳಲ್ಲಿ ಒಕ್ಕಲ್ಲೇಬಿಸುತ್ತೀರಿ. ಸಾಗುವಳಿ ಜಮೀನಿಗೆ ಹಕ್ಕುಪತ್ರ ಸಿಗದೇ ಜನರಿಗೆ ತೊಂದರೆಯಾಗಲಿದೆ ಎಂದರು. 

ಜಿಲ್ಲಾ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಅರಣ್ಯ ಇಲಾಖೆ ಜನರ ನಂಬಿಕೆಯನ್ನು ಉಳಿಸಿಕೊಂಡಿಲ್ಲ, ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ಘೋಷಣೆಯಾದ ಬಳಿಕ ಅವರ ನಿಜಮುಖ ಗೊತ್ತಾಗುತ್ತದೆ. ನಿಮ್ಮನ್ನು ನಂಬಿ ನಾವು ಸಭೆಗೆ ಬಂದಿಲ್ಲ, ಸಂರಕ್ಷಿತ ಪ್ರದೇಶ ಘೋಷಣೆಯಿಂದ ರೈತರಿಗೆ ತೊಂದರೆಯಾಗಬಾರದು ಎಂದರು.

ವಿಧಾನ ಪರಿಷತ್ ಶಾಸಕ ಎಸ್.ಎಲ್.ಬೋಜೇಗೌಡ ಮಾತನಾಡಿ, ಜನರ ಜೀವನದ ಜೊತೆ ಚೆಲ್ಲಾಟವಾಡಬಾರದು. ರೈತರ ಜೀವಾಳ ಗೋಮಾಳ, ಫಾರಂ. 50, 53, ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ, ಪನರ್ ಪರಿಶೀಲಿಸುವಂತೆ ನ್ಯಾಯಾಲಕ್ಕೆ ಯಾಕೆ ರೀಟ್ ಹಾಕಬಾರದು. ಈ ವಿಚಾರದಲ್ಲಿ ಆತುರಬೇಡ, ಜನಾಭಿಪ್ರಾಯ ಸಂಗ್ರಹಿಸಲು ಇನ್ನೂ ಕಾಲಾವಕಾಶವಿದೆ ಎಂದ ಅವರು, ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ಘೋಷಣೆಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಯೋಜನೆ ವ್ಯಾಪ್ತಿಗೆ ಸೇರುವ ಗ್ರಾಮಗಳ ಗ್ರಾಮಸ್ಥರ ಅಭಿಪ್ರಾಯ ಕೇಳಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡಿಲ್ಲ, ಸಾಧಕ ಭಾದಕಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿಲ್ಲ ಜನರ ಮನಸ್ಸನ್ನೂ ಅರ್ಥಮಾಡಿಕೊಳ್ಳಿ. ಜನರ ವಿಶ್ವಾಸಗಳಿಸಿ ಬದುಕಬೇಕಾಗುತ್ತದೆ ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಕಾನೂನಿನ ಹೆಸರಿನಲ್ಲಿ ಜನರ ಜೀವನದ ಜೊತೆ ಚೆಲ್ಲಾಟವಾಡಬಾರದು ಎಂದರು.

ಪರಿಸರವಾದಿಗಳ ವಿರುದ್ಧ ಆಕ್ರೋಶ: ಸಭೆಯುದ್ದಕ್ಕೂ ಗ್ರಾಮಸ್ಥರು ಹಾಗೂ ವಿಧಾನ ಪರಿಷತ್ ಶಾಸಕ ಎಸ್.ಎಲ್. ಬೋಜೇಗೌಡ ಪರಿಸರವಾದಿಗಳ ವಿರುದ್ಧ ಹರಿಹಾಯ್ದರು. 21-11-2017ರಲ್ಲಿ ವೈಲ್ಡ್‍ಕ್ಯಾಟ್-ಸಿ ಸರಕಾರೇತರ ಸಂಸ್ಥೆ ನ್ಯಾಯಾಲಯದ ಮೆಟ್ಟಿಲ್ಲೇರಿದ್ದರಿಂದ ಇಂದು ಸಮಸ್ಯೆ ಉದ್ಬವವಾಗಿದೆ. ಜನರ ಅಭಿಪ್ರಾಯ ಪಡೆಯದೇ, ಅವರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ನ್ಯಾಯಾಲಯದ ಮೆಟ್ಟಿಲೇರಿದ್ದು ಗ್ರಾಮಸ್ಥರು ತೀವ್ರವಾಗಿ ಖಂಡಿಸಿದರು. ಇದು ಗ್ರಾಮಸ್ಥರು ಮತ್ತು ಪರಿಸರವಾದಿಗಳ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು. ಗ್ರಾಮಸ್ಥರೊರ್ವರು ಮಾತನಾಡುತ್ತಿರುವಾಗ ಮೈಕ್ ಕಸಿದುಕೊಂಡಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಸಚಿವ ಸಿ.ಟಿ.ರವಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದುಕೊಂಡು ಗೊಂದಲಕ್ಕೆ ತೆರೆ ಎಳೆದರು.

ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಸ್.ಧರ್ಮೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್, ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್.ಸುರೇಶ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. 

ಅರಣ್ಯಾಧಿಕಾರಿಗಳ ವಿರುದ್ಧ ಹರಿಹಾಯ್ದ ಗ್ರಾಮಸ್ಥರು:
ಸಭೆ ಆರಂಭಗೊಳ್ಳುತ್ತಿದ್ದಂತೆ ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ಘೋಷಣೆ, ಭದ್ರಾ ಹುಲಿ ಯೋಜನೆ ಪರಿಸರ ಸೂಕ್ಷ್ಮ ವಲಯದಡಿಯಲ್ಲಿ ಕೋರ್ ಝೋನ್, ಬಫರ್ ಝೋನ್ ಘೋಷಣೆ ವಿರುದ್ಧ ಗ್ರಾಮಸ್ಥರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಸರಕಾರ ಘೋಷಗೆ ಮುಂದಾಗಿರುವ ಈ ಯೋಜನೆಗಳಿಂದ ಈ ಭಾಗದ ರೈತರಿಗೆ ಭಾರೀ ಅನಾನುಕೂಲ ಉಂಟಾಗಲಿದೆ. ಈಗಾಗಲೇ ಅನೇಕ ಯೋಜನೆಗಳಿಂದ ಈ ಭಾಗದ ಜನರು ನೋವು ಅನುಭವಿಸುತ್ತಿದ್ದು, ಮತ್ತೆ ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಜನರ ಬದುಕು ಕಿತ್ತುಕೊಂಡತ್ತಾಗುತ್ತದೆ. ಜನರ ಬದುಕಿಗೆ ತೊಂದರೆಯಾಗದಂತೆ ಯೋಜನೆ ರೂಪಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಅನೇಕ ಬಾರೀ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪರಿಣಾಮ ಸಭೆಯಲ್ಲಿ ಗದ್ದಲ, ಗೊಂದಲ ಏರ್ಪಟ್ಟಿತ್ತು.

ಅಧಿಕಾರಿಗಳ ಸಭೆಯಲ್ಲಿ ಪರಿಸರವಾದಿಗಳು
ಪರಿಸರವಾದಿಗಳು ಅಧಿಕಾರಿಗಳ ಸಭೆಗೆ ಭಾಗವಹಿಸುತ್ತಾರೆ. ಅಧಿಕಾರಿಗಳು ಮಾತ್ರ ಭಾಗವಹಿಸಬೇಕಾದ ಸಭೆಗೆ ಪರಿಸರವಾದಿಗಳಿಗೆ ಆಹ್ವಾನ ನೀಡಲಾಗುತ್ತದೆ. ಸಭೆಯ ಪ್ರೋಟೋಕಾಲ್‍ನಲ್ಲಿ ಅಧಿಕಾರಿಗಳ ಹೆಸರಿನ ಜೊತೆ ಪರಿಸರವಾದಿಗಳ ಹೆಸರು ಸೇರಿಸಿದ್ದಾರೆ. ಇವರನ್ನು ಸೇರಿಸಲು ಯಾರು ಅಧಿಕಾರ ನೀಡಿದವರು? ಪರಿಸರವಾದಿಗಳಿಗೂ ಅಧಿಕಾರಿಗಳಿಗೂ ಇರುವ ಸಂಬಂಧ ಏನು? ಎಂದು ವಿಧಾನ ಪರಿಷತ್ ಶಾಸಕ ಎಸ್.ಎಲ್.ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News