ಒಡಿಶಾದಲ್ಲಿ ಭಾರೀ ಮಳೆ: 12 ಸಾವು, 4 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತ

Update: 2020-08-29 15:29 GMT

ಭುವನೇಶ್ವರ, ಆ. 29: ಚತ್ತೀಸ್‌ಗಢದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿದಿರುವುದು ಹಾಗೂ ಹಿರಾಕಡ್ ಅಣೆಕಟ್ಟಿನಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದರಿಂದ ಒಡಿಶಾದ ಮಹಾನದಿ ನದಿ ವ್ಯವಸ್ಥೆಯಲ್ಲಿ ನೆರೆ ಉದ್ಭವಿಸುವ ಭೀತಿ ಉಂಟಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಶುಕ್ರವಾರದಿಂದ ಮಳೆ ಸಂಬಂಧಿ ಘಟನೆಗಳಲ್ಲಿ ಇನ್ನೂ 5 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ನೆರೆ ಸಂತ್ರಸ್ತ 10 ಜಿಲ್ಲೆಗಳಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಹಾಗೂ 4,15,817 ಜನರು ಸಂತ್ರಸ್ತರಾಗಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪಿ.ಕೆ. ಜೆನಾ ತಿಳಿಸಿದ್ದಾರೆ.

ಒಡಿಶಾದ ಸಾಂಬಾರ್‌ಪುರ ಪ್ರದೇಶದ ಸಮೀಪ ಮಹಾನದಿಗೆ ನಿರ್ಮಿಸಲಾದ ಹಿರಾಕುಡ್ ಅಣೆಕಟ್ಟಿನ 64 ಗೇಟುಗಳನ್ನು ತೆರೆದು ಹೆಚ್ಚುವರಿ ನೀರು ಹರಿದು ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾನದಿ ನದಿ ವ್ಯವಸ್ಥೆಯಲ್ಲಿ ಉಂಟಾದ ನೆರೆ ಪುರಿ, ಖುರ್ದಾ, ಕಥಕ್, ಜಗತ್‌ಸಿಂಗ್‌ಪುರ ಹಾಗೂ ನಯಾಗಾರದಂತಹ ಕರಾವಳಿ ಜಿಲ್ಲೆಗಳ ಮೇಲೆ ದುಷ್ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ. ಹಲವು ನದಿಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಇದರಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಅಂಗುಲ್, ಬಲಾಂಗಿರ್, ಬಾಲಸೂರೆ, ಬೌದ್ಧ, ಕತಕ್, ಜೈಪುರ, ಧೇಂಖನಲ್, ನೌಪಾಡಾ, ದಿಯೋಗಢ ಹಾಗೂ ಸೋನೆಪುರಗಳ 54 ಬ್ಲಾಕ್‌ಗಳ 1,276 ಗ್ರಾಮಗಳ 4,15,817 ಜನರು ಸಂತ್ರಸ್ತರಾಗಿದ್ದಾರೆ ಎಂದು ಜೇನ ತಿಳಿಸಿದ್ದಾರೆ. 3.83 ಲಕ್ಷ ಜನರಿರುವ 552 ಗ್ರಾಮಗಳು ಜಲಾವೃತವಾಗಿವೆ. 2,757 ಮನೆಗಳು ಹಾನಿಗೀಡಾಗಿವೆ. ನೆರೆ ಸಂತ್ರಸ್ತ ಪ್ರದೇಶಗಳಿಂದ 18,534ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಹಾಗೂ ಅವರನ್ನು 106 ತಾತ್ಕಾಲಿಕ ಶಿಬಿರಗಳಿಗೆ ವರ್ಗಾಯಿಸಲಾಗಿದೆ ಎಂದು ಜೇನ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News