ಎಸೆಸೆಲ್ಸಿ ವಿದ್ಯಾರ್ಥಿನಿಯ ಅಂಕ ಕಡಿತ: ಅಧಿಕಾರಿಗಳ ಎಡವಟ್ಟು ಆರೋಪ

Update: 2020-08-29 17:15 GMT

ಗದಗ, ಆ.29: ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳ ಎಡವಟ್ಟಿನಿಂದಾಗಿ 10ನೆ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾರ್ಥಿನಿಯೊಬ್ಬಳ ಅಂಕಗಳು ಕಡಿತಗೊಂಡಿದೆ ಎನ್ನುವ ಆರೋಪ ಕೇಳಿಬಂದಿದೆ.

ಇಲ್ಲಿನ ಹುಯಿಲಗೋಳ ಗ್ರಾಮದ ಕುಸುಮಾ ಕುಸುಗಲ್ ಎಂಬ ಬಾಲಕಿ ಹುಬ್ಬಳ್ಳಿಯ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಈಕೆಯ ಉತ್ತರ ಪತ್ರಿಕೆ ಹಾಗೂ ಅಂಕ ಪಟ್ಟಿಯಲ್ಲಿರುವ ಅಂಕಿಗಳನ್ನು ತಾಳೆ ಹಾಕಿದಾಗ 26 ಅಂಕಗಳು ತಗ್ಗಿವೆ ಎನ್ನಲಾಗಿದೆ,

ಇತ್ತೀಚಿಗೆ ಪ್ರಕಟಗೊಂಡ 10ನೆ ತರಗತಿ ಪರೀಕ್ಷೆಯಲ್ಲಿ ಕುಸುಮಾ ಒಟ್ಟು 625 ಕ್ಕೆ 476 ಅಂಕ ಗಳಿಸಿದ್ದು, ಕನ್ನಡ ಭಾಷೆಯಲ್ಲಿ 125ಕ್ಕೆ 116 ಅಂಕ, ಇನ್ನುಳಿದಂತೆ ಇಂಗ್ಲಿಷ್- 73, ಹಿಂದಿ- 96, ವಿಜ್ಞಾನ- 69, ಸಮಾಜ ವಿಜ್ಞಾನದಲ್ಲಿ 74 ಅಂಕ ಗಳಿಸಿದ್ದಾಳೆ. ಆದರೆ, ಗಣಿತ ವಿಷಯದಲ್ಲಿ 48 ಅಂಕ ಬಂದಿದ್ದರಿಂದ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಬೇಸರ ಮೂಡಿಸಿತ್ತು. ಹಾಗಾಗಿ ಉತ್ತರ ಪತ್ರಿಕೆಯ ಪ್ರತಿ ಪಡೆದು ನೋಡಿದಾಗ 26 ಅಂಕಗಳು ಕಡಿಮೆ ಬಂದಿದ್ದು, ಅಧಿಕಾರಿಗಳ ಲೋಪ ಬೆಳಕಿಗೆ ಬಂದಿದೆ.

ಪರೀಕ್ಷೆಯಲ್ಲಿ ಕುಸುಮಾ 74 ಅಂಕ ಪಡೆದಿದ್ದಾಳೆ ಎಂದು ಉತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಿದೆ. ಆದರೆ, ಅಂಕಪಟ್ಟಿಯಲ್ಲಿ ಒಟ್ಟು 48 ಅಂಕಗಳು ಎಂದು ತಪ್ಪಾಗಿ ನಮೂದಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಈ ಲೋಪವನ್ನು ಸರಿಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಗ್ರಾಮೀಣ ಮತ್ತು ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದರೂ ಕೂಡ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News