ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ನೀಡದ ವಿಚಾರ: ಅಫಿಡವಿಟ್ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

Update: 2020-08-29 17:28 GMT

ಬೆಂಗಳೂರು, ಆ.29: ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪಡೆ ಮತ್ತು ಬ್ಯಾಂಡ್‍ಮನ್ ನೇಮಕಾತಿಗೆ ಅರ್ಜಿ ಸಲ್ಲಿಸಲು ತೃತೀಯ ಲಿಂಗಿಗಳಿಗೆ ಅವಕಾಶ ನೀಡದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂಕೋರ್ಟ್ ಆದೇಶ ಪಾಲಿಸಿರುವ ಬಗ್ಗೆ ಸೆ.29ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಈ ಕುರಿತು ಬೆಂಗಳೂರಿನ ಮಂಗಳಮುಖಿಯರ ಸಲಹೆಗಾರ್ತಿ ನಿಶಾ ಗೂಳೂರು(ಸಂಗಮ ಪಹೆಚಾನ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಸುಪ್ರೀಂಕೋರ್ಟ್ ಆದೇಶದಂತೆ ಮಂಗಳಮುಖಿಯರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶ ಒದಗಿಸಲು ನಿರ್ದೇಶಿಸಿದ್ದರೂ ಅಧಿಸೂಚನೆಯಲ್ಲಿ ಮೀಸಲಾತಿ ಕಲ್ಪಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಸರಕಾರದ ಪರ ವಾದಿಸಿದ ವಕೀಲರು, ಈ ಸಮುದಾಯದವರಿಗೆ ಮೀಸಲಾತಿ ಒದಗಿಸಲು ನಿಯಮಗಳನ್ನು ರೂಪಿಸುವ ವಿಷಯ ರಾಜ್ಯ ಸಚಿವ ಸಂಪುಟದ ಅನುಮೋದನೆಗೆ ಕಾದಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು.

ವಿಶೇಷ ಮೀಸಲು ಕಾನ್‍ಸ್ಟೆಬಲ್ ಪಡೆ ಮತ್ತು ಬ್ಯಾಂಡ್‍ಮನ್ ಸೇರಿ 2,467 ಹುದ್ದೆಗಳಿಗೆ ಪೊಲೀಸ್ ಇಲಾಖೆ ಅರ್ಜಿ ಆಹ್ವಾನಿಸಿದ್ದು, ಪುರುಷ ಮತ್ತು ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News