ಅಭಿರಾಮ್ ಶಂಕರ್ ಅವರ ಕೋರಿಕೆ ಮೇರೆಗೆ ವರ್ಗಾವಣೆ: ಸಚಿವ ಎಸ್.ಟಿ.ಸೋಮಶೇಖರ್

Update: 2020-08-29 17:41 GMT

ಮೈಸೂರು,ಆ.29: ಮೈಸೂರು ಜಿಲ್ಲಾಧಿಕಾಗಿದ್ದ ಅಭಿರಾಮ್ ಜಿ. ಶಂಕರ್ ಅವರ ಕೋರಿಕೆ ಮೇರೆಗೆ ಅವರನ್ನು ವರ್ಗಾವಣೆ ಮಾಡಲಾಗಿದೆಯೇ ಹೊರತು ಸರ್ಕಾರ ಅವರನ್ನು ವರ್ಗಾವಣೆ ಮಾಡಿಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶನಿವಾರ ಆಯೋಜಿಸಿದ್ದ ಡಾ.ರಾಜೇಂದ್ರ ಸ್ವಾಮೀಜಿಗಳ 105ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಅಭಿರಾಮ್ ಜಿ. ಶಂಕರ್ ಅವರು ಕಳೆದ ಹದಿನೈದು ದಿನಗಳ ಹಿಂದೆಯೇ ಮಹಾರಾಷ್ಟ್ರದ ಮಸ್ಸೂರಿಗೆ 2 ವರ್ಷದ ತರಬೇತಿಗಾಗಿ ಹೋಗಬೇಕು, ಹಾಗಾಗಿ ನನ್ನನ್ನು ವರ್ಗಾಣೆ ಮಾಡುವಂತೆ ಕೋರಿದ್ದರು. ಜೊತೆಗೆ ನನ್ನ ವೃತ್ತಿ ಜೀವನದಲ್ಲಿ ಅನುಕೂಲವಾಗುತ್ತದೆ ಎಂದು ನನ್ನ ಬಳಿ ಕೇಳಿಕೊಂಡಿದ್ದರು. ಅವರ ಕೋರಿಕೆ ಮೇರೆಗೆ ವರ್ಗಾವಣೆ ಮಾಡಲಾಗಿದೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಅಧಿಕಾರಗಳೊಂದಿಗೆ ಸಭೆ: ಮೈಸೂರಿನಲ್ಲಿ ಕೊರೋನ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಯಾವ ಕಾರಣಕ್ಕೆ ಸೋಂಕು ಕಡಿಮೆಯಾಗುತ್ತಿಲ್ಲ ಎಂದು ನಾಳೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನಸ್ಥಾಪ ಇರುವುದು ನಿಜ, ಅದನ್ನು ಬಗೆಹರಿಸಿ ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ನಿರಂತರ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಮಧ್ಯೆ ರಜೆ ನೀಡಲು ಸೂಚಿಸಲಾಗಿದೆ. ಕೊರೋನ ನಿಯಂತ್ರಣ ಸಂಬಂಧ ಎಲ್ಲಾ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಹೈಪವರ್ ಕಮಿಟಿ ಸಭೆ ನಂತರ ದಸರಾ ತೀರ್ಮಾನ: ಮುಖ್ಯಮಂತ್ರಿ ಬಿ.ಎಸ.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂದಿನ ವಾರ ಮೈಸೂರಿನಲ್ಲಿ ಹೈಪವರ್ ಕಮಿಟಿ ಸಭೆ ನಡೆಸಲಾಗುವುದು. ನಂತರ ಮೈಸೂರು ದಸರಾ ಆಚರಣೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೈಸೂರು ದಸರಾ ಆಚರಣೆ ಸಂದರ್ಭ ಆನೆಗಳು ಬೇಕೊ ಬೇಡವೋ ಎಂಬ ಬಗ್ಗೆಯೂ ಕೂಡ ಹೈಪವರ್ ಕಮಿಟಿ ನಂತರ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News