ಮೈಸೂರು: ಕಾಡಂಚಿನ ಮಕ್ಕಳಿಗೆ ಗಗನ ಕುಸುಮವಾದ ಆನ್‌ಲೈನ್ ಶಿಕ್ಷಣ

Update: 2020-08-29 18:00 GMT

ಮೈಸೂರು, ಆ.29: ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಪ್ರಾರಂಭವಾಗಿದ್ದರೂ ಕಾಡಂಚಿನಲ್ಲಿ ವಾಸ ಮಾಡುತ್ತಿರವ ಮಕ್ಕಳು ಮಾತ್ರ ಇದರಿಂದ ವಂಚಿತರಾಗಿದ್ದಾರೆ.

ಮೈಸೂರು ಜಿಲ್ಲಾ ಕೇಂದ್ರದಿಂದ 90 ಕಿ.ಮೀ. ದೂರದಲ್ಲಿರುವ ಎಚ್.ಡಿ. ಕೋಟೆ ತಾಲೂಕಿನ ಮಾಣಿಮೂಲೆ ಹಾಡಿ ಇದಕ್ಕೆ ಸ್ಪಷ್ಟ ಉದಾಹರಣೆ. 226ಕ್ಕೂ ಹೆಚ್ಚು ಹಾಡಿಗರು ವಾಸಿಸುವ ಈ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಆದರೆ, ತಮ್ಮ ಹಾಡಿಯಲ್ಲಿ ಸೂಕ್ತ ವಿದ್ಯುತ್ ದೀಪ, ಸೌರಶಕ್ತಿ, ದೂರದರ್ಶನ ವೀಕ್ಷಿಸುವ ಸೌಲಭ್ಯವಿಲ್ಲದೇ ಆನ್‌ಲೈನ್ ಶಿಕ್ಷಣ, ವಿದ್ಯಾಗಮ ಹಾಗೂ ದೂರದರ್ಶನದ ಪಾಠ ಪ್ರವಚನಗಳು ಇಲ್ಲಿಯ ಮಕ್ಕಳಿಗೆ ಗಗನ ಕುಸುಮವಾಗಿದೆ.

ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ, ಎನ್. ಬೆಳತ್ತೂರು ಗ್ರಾಪಂ ನಲ್ಲಿ 15 ಹಾಡಿಗಳು ಕಾಡಿನೊಳಗಿದ್ದು, ಸಾರ್ವಜನಿಕ ಸಂಪರ್ಕದಿಂದ ದೂರ ಉಳಿದಿವೆ. ಕಾಡಿನಿಂದ ಆಚೆ ಇರುವ ಶಾಲೆಗಳಿಗೆ ತೆರಳುತ್ತಿದ್ದ ಇಲ್ಲಿನ ವಿದ್ಯಾರ್ಥಿಗಳು ಲಾಕ್‌ಡೌನ್ ಬಳಿಕ ಶಾಲೆ ಹಾಗೂ ಪಠ್ಯಚಟುವಿಕೆ ಇಲ್ಲದೇ ಹಾಡಿಯಲ್ಲೆ ಉಳಿದಿದ್ದಾರೆ.

ದೂರದರ್ಶನ ಸೌಲಭ್ಯವೂ ಇಲ್ಲ: ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ, ಎನ್.ಬೆಳತ್ತೂರು ಗ್ರಾಪಂ 15 ಹಾಡಿಗಳು ಕಾಡಿನೊಳಗಿದ್ದು, ಇಲ್ಲಿನ ಯಾವುದೇ ಮೂಲ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ದೂರದರ್ಶನದಲ್ಲಿ ಪಾಠ ಪ್ರವಚನ ಪ್ರಸಾರವಾಗುತ್ತಿದೆ. ಆದರೆ, ಅದನ್ನು ವೀಕ್ಷಿಸಲು ನಮ್ಮಲ್ಲಿ ಟಿವಿಗಳಿಲ್ಲ. ಟಿವಿ ತಂದರೂ ಅದಕ್ಕೆ ವಿದ್ಯುತ್, ಕೇಬಲ್ ಸಮಸ್ಯೆ ಎಂಬುದು ಹಾಡಿಗರ ಅಳಲು.

ಆನ್ಲೈನ್ ಶಿಕ್ಷಣ, ವಿದ್ಯಾಗಮ ಹಾಗೂ ದೂರದರ್ಶನ ಶಿಕ್ಷಣದಿಂದ ವಂಚಿತವಾಗಿರುವುದು ಕೇವಲ ಎಚ್.ಡಿ.ಕೋಟೆ ಹಾಡಿಗಳಿಗಷ್ಟೇ ಸೀಮಿತವಾಗಿಲ್ಲ. ಪಿರಿಯಾಪಟ್ಟಣ, ಹುಣಸೂರು ತಾಲೂಕಿನಲ್ಲಿರುವ ನೂರಕ್ಕೂ ಹೆಚ್ಚು ಹಾಡಿಗಳ ಚಿತ್ರಣವೂ ಹೆಚ್ಚುಕಡಿಮೆ ಇದೆ ಆಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿ ಮತ್ತು ಶಿಕ್ಷಕರು ಹಾಡಿಗಳಲ್ಲಿನ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು ಎಂದು ಇಲ್ಲಿನ ಪೋಷಕರ ಒತ್ತಾಯಿಸಿದ್ದಾರೆ.

ವಿದ್ಯಾಗಮವೂ ಇಲ್ಲ
ಆನ್‌ಲೈನ್ ಶಿಕ್ಷಣ ತಲುಪದ ಭಾಗಗಳಿಗೆ ಶಿಕ್ಷಕರು ವಿದ್ಯಾರ್ಥಿಗಳ ಬಳಿಗೆ ತೆರಳಿ ಎಂಟತ್ತು ಮಕ್ಕಳಿಗೆ ಪಾಠ ಹೇಳಲು ವಿದ್ಯಾಗಮ ಪದ್ಧತಿಯನ್ನು ಸರಕಾರ ಆರಂಭಿಸಿದೆ. ಆದರೆ, ಈ ಪದ್ಧತಿ ಪಟ್ಟಣ ಮತ್ತು ಹೋಬಳಿ ಕೇಂದ್ರಗಳಿಷ್ಟೇ ಸೀಮಿತವಾಗಿದೆ. ಶಿಕ್ಷಕರು ಪಕ್ಕದೂರಿನ ಶಾಲೆಗೆ ಬರುತ್ತಾರೆ. ಆದರೆ, ಕಾಡಿನೊಳಗೆ ಇರುವ ನಮ್ಮ ಹಾಡಿಗಳಿಗೆ ಬರುತ್ತಿಲ್ಲ. ನಮ್ಮ ಮಕ್ಕಳು ಶಾಲೆ ಇಲ್ಲ ಎಂದು ಕಾಡಿನಿಂದ ಹೊರಗೆ ಹೋಗುತ್ತಿಲ್ಲ ಎಂದು ಹಾಡಿಗಳಲ್ಲಿನ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಿತ್ಯ ಕೂಲಿಯನ್ನೇ ಅವಲಂಭಿಸಿರುವ ನಾವು ಬೆಳಗ್ಗೆ ಎದ್ದು ಕೆಲಸಕ್ಕೆ ತೆರಳಿದರೆ ಬರುವುದು ಸಂಜೆಯಾಗುತ್ತದೆ. ಮಕ್ಕಳು ಹಾಡಿಯ್ಲಲೆ ಇರುತ್ತವೆ. ಇವರಿಗೆ ಓದಿಸಲು ನಮ್ಮಲ್ಲಿ ಯಾರೂ ಇಲ್ಲ. ರಾತ್ರಿ ವೇಳೆ ಕಲಿಸಲು ನಮಗೆ ಅಕ್ಷರ ಜ್ಞಾನವೂ ಇಲ್ಲ. ನಮ್ಮಲ್ಲಿ ದೊಡ್ಡ ಮೊಬೈಲ್ ಇಲ್ಲ. ಇದ್ದರೂ ನೆಟ್ವರ್ಕ್ ಸಮಸ್ಯೆ. ಶಾಲೆ ಆರಂಭವಾದಾಗ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ

-ಮಾಣಿಮೂಲೆ ಹಾಡಿಯ ಮಂಜುಳಮ್ಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News