​ಚೀನಾದಲ್ಲಿ ರೆಸ್ಟೋರೆಂಟ್ ಕುಸಿತ: 29 ಮಂದಿ ಮೃತ್ಯು

Update: 2020-08-30 03:49 GMT

ಬೀಜಿಂಗ್ : ಉತ್ತರ ಚೀನಾದಲ್ಲಿ ಎರಡು ಮಹಡಿಯ ರೆಸ್ಟೋರೆಂಟ್ ಕುಸಿದು ಬಿದ್ದು ಕನಿಷ್ಠ 29 ಮಂದಿ ಮೃತಪಟ್ಟಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡವರ ರಕ್ಷಣಾ ಕಾರ್ಯ ಮುಂದುವರಿದಿದ್ದು, ಹಲವು ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾಂಗ್‌ಫೆನ್ ಕೌಂಟಿಯಲ್ಲಿ ಬಾಂಕ್ವೆಟ್‌ಗಳಿಗಾಗಿ ಬಳಸುತ್ತಿದ್ದ ಎರಡು ಮಹಡಿಯ ಕಟ್ಟಡ ಶನಿವಾರ ಬೆಳಗ್ಗೆ ಕುಸಿದಿದೆ ಎಂದು ಪ್ರಸಾರ ಸಂಸ್ಥೆ ಸಿಜಿಟಿಎನ್ ವರದಿ ಮಾಡಿದೆ.

"ಹಲವು ಮಂದಿಯನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದ್ದು, ಈ ಪೈಕಿ 29 ಮಂದಿ ಮೃತಪಟ್ಟಿದ್ದಾರೆ. ಏಳು ಮಂದಿಗೆ ಗಂಭೀರ ಗಾಯಗಳಾಗಿದ್ದು, 21 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ" ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ರಕ್ಷಣಾ ಪಡೆ ಯೋಧರು ಅವಶೇಷಗಳಡಿ ಸಿಕ್ಕಿಹಾಕಿಕೊಂಡವರ ರಕ್ಷಣೆಗೆ ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿರುವ ಚಿತ್ರಗಳನ್ನು ಸಿಜಿಟಿಎನ್ ವೆಬ್‌ಸೈಟ್ ಪೋಸ್ಟ್ ಮಾಡಿದೆ. 700 ಮಂದಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News