ಕೊರೋನ ಗೆದ್ದು ಬಂದು ಗುಡಾರದಲ್ಲಿ ಮಲಗಿರುವ ಕೆರೆ ಕಾಮೇಗೌಡ

Update: 2020-08-30 16:27 GMT

ಮಂಡ್ಯ, ಆ.30: ಕೊರೋನ ಗೆದ್ದು ಬಂದ ಮಳವಳ್ಳಿ ತಾಲೂಕು ದಾಸನದೊಡ್ಡಿಯ ಕೆರೆ ಕಾಮೇಗೌಡ, ತನ್ನಿಂದ ಇತರರಿಗೆ ತೊಂದರೆಯಾಗಬಾರದೆಂದು ಏಕಾಂತವಾಸ ಅನುಭವಿಸುತ್ತಾ ‘ಅನಾಥ’ನಂತೆ ಬಿದ್ದಿದ್ದಾರೆ. ಕೋವಿಡ್ ಜಿಲ್ಲಾಸ್ಪತ್ರೆಯಿಂದ ಕೊರೋನದಿಂದ ಗುಣಮುಖರಾಗಿ ಬಿಡುಗಡೆಯಾಗಿ ಗ್ರಾಮಕ್ಕೆ ಮರಳಿದ ಸುಮಾರು ಒಂದು ತಿಂಗಳಿಂದಲೂ ಕಾಮೇಗೌಡರು ತನ್ನ ಮನೆಯ ಹಿತ್ತಲಿನಲ್ಲಿ ಗುಡಾರ ಕಟ್ಟಿಕೊಂಡು ಮಲಗಿಬಿಟ್ಟಿದ್ದಾರೆ.

ಮಕ್ಕಳು, ಮೊಮ್ಮಕ್ಕಳ ತುಂಬು ಕುಟುಂಬದ ಕಾಮೇಗೌಡರು, ಮನೆಯ ಹಿತ್ತಲಿನಲ್ಲಿ ಗುಡಾರ ಹಾಕಿಕೊಂಡು ಅನಾಥನಂತೆ ಮಲಗಿರುವುದು ನೋಡಿದವರಿಗೆ ಆಶ್ವರ್ಯ ಹುಟ್ಟಿಸುತ್ತಿದೆ. ಕುರಿಗಾಹಿ ಕಾಮೇಗೌಡರು ನಿರ್ಮಿಸಿದ ಕಟ್ಟೆಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಕುಂದನಬೆಟ್ಟ ಹಸಿರು ಹೊದ್ದು ಮಲಗಿದೆ. ಅದರ ಸೊಬಗು ಸವಿಯುತ್ತಿದ್ದ ಕಾಮೇಗೌಡರು ಗುಡಾರದೊಳಗೆ ಮುಸುಕೆಳೆದುಕೊಂಡು ಮಲಗಿಬಿಟ್ಟಿದ್ದಾರೆ.

ಬರಡುಗಾಡಿನ ತನ್ನ ಗ್ರಾಮದ ಬಳಿ ಇರುವ ಕುಂದನಬೆಟ್ಟದಲ್ಲಿ ಕುರಿಕಾಯ್ದುಕೊಂಡು ಸುಮಾರು 13 ಕಟ್ಟೆಗಳನ್ನು ನಿರ್ಮಿಸಿ ಗಮನ ಸೆಳೆದಿದ್ದ ಕಾಮೇಗೌಡರ ಸಾಧನೆ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸಿಸಲ್ಪಟ್ಟ ಮೇಲೆ ದೇಶದ ಮೂಲೆಮೂಲೆಗೂ ಹಬ್ಬಿತು. ಜಿಲ್ಲಾಡಳಿತ ಕಾಮೇಗೌಡರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿತು. 

ಈಗಾಗಲೇ ಮುರಘಮಠದ ಬಸವಶ್ರೀ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಕಾಮಗೇಡರನ್ನು ಅರಸಿ ಬಂದಿದ್ದು, ಪ್ರಶಸ್ತಿಯ ಬಹುಪಾಲು ಹಣವನ್ನೂ ಕೆರೆಕಟ್ಟೆ ನಿರ್ಮಿಸಲು ಕಾಮೇಗೌಡರು ವಿನಿಯೋಗಿಸಿದರು.

ಇತ್ತೀಚಿಗೆ ಕಾಮೇಗೌಡರ ಕಾಲಿಗೆ ಗಾಯವಾಗಿ ಜಿಲ್ಲಾಡಳಿತ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿತು. ಮನೆಗೆ ಮರಳಿದ ನಂತರ, ಕೊರೋನ ಸೋಂಕು ಕಂಡುಬಂತು. ಕೊರೋನವನ್ನು ಕಾಮೇಗೌಡರು ಗೆದ್ದು ಮನೆಗೆ ಮರಳಿದರು. ಆದರೆ ಮನೆಗೆ ಮರಳಿದ ನಂತರ, ಮನೆಯ ಹಿತ್ತಲಲ್ಲಿ ಗುಡಾರ ಹಾಕಿಕೊಂಡು ವಾಸಿಸುತ್ತಿದ್ದಾರೆ. ಊಟ, ನೀರು ತಲುಪಿಸುವುದು ಬಿಟ್ಟರೆ, ಮನೆಯವರೂ ಅಲ್ಲಿಗೆ ಸುಳಿಯದಂತೆ ಕಾಮೇಗೌಡರು ಕಟ್ಟಾಜ್ಞೆ ವಿಧಿಸಿದ್ದಾರೆ. ಕಾಮೇಗೌಡ ಕೊರೋನ ಗೆದ್ದರೂ ಕಾಲಿನ ಗಾಯ ಬಾಧೆಯಿಂದ ಅವರು ಇನ್ನೂ ಮುಕ್ತಿ ಹೊಂದಿಲ್ಲ.

ಕೊರೋನ ಗೆದ್ದು ಬಂದಿದ್ದೇನೆ. ಆದರೂ ಮುನ್ನಚ್ಚರಿಕೆ ವಹಿಸಬೇಕು. ಮನೆಯಲ್ಲಿ ಚಿಕ್ಕಚಿಕ್ಕ ಮೊಮ್ಮಕ್ಕಳಿದ್ದಾರೆ. ಅವರ ಆರೋಗ್ಯ ಬಹಳ ಮುಖ್ಯ. ಹಾಗಾಗಿ ನಾನು ಹಿತ್ತಲಲ್ಲಿ ಪ್ರತ್ಯೇಕವಾಗಿ ಇದ್ದೇನೆ ಎಂದು ಕಾಮೇಗೌಡ ವಿವರಣೆ ಕೊಡುತ್ತಾರೆ. ಇಲ್ಲಿಯವರೆಗೂ ಕಾಳಜಿ ವಹಿಸಿದ್ದ ಜಿಲ್ಲಾಡಳಿತ ಇದನ್ನೂ ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಈ ಪ್ರಪಂಚದಲ್ಲಿ ಮನುಷ್ಯರಿಗೆ ಕೆರೆಕಟ್ಟೆ ಕಟ್ಟಿಸಿದವರನ್ನು ನೋಡಿದ್ದೇವೆ, ಆದರೆ, ಪ್ರಾಣಿ-ಪಕ್ಷಿಗಳಿಗೆ ಕಟ್ಟಿಸಿರುವುದನ್ನು ಕಂಡಿಲ್ಲ. ಹಾಗಾಗಿ ಪ್ರಾಣಿಪಕ್ಷಿಗಳ ದಾಹ ತಣಿಸಲು ಬೆಟ್ಟದಲ್ಲಿ ಸಣ್ಣಸಣ್ಣ ಕೆರೆಗಳನ್ನು ನಿರ್ಮಿಸಿದ್ದೇನೆಯೇ ಹೊರತು ಪ್ರಶಸ್ತಿ ಪುರಸ್ಕಾರಗಳಿಗಲ್ಲ. ನನ್ನ ಕಾಯಕದ ಬಗ್ಗೆ ಅನುಮಾನಿಸುವವರಿಗೆ ಕೆರೆಗಳಿರುವ ಕುಂದನಬೆಟ್ಟವೇ ಸಾಕ್ಷಿ.
-ಕೆರೆ ಕಾಮೇಗೌಡ

“ಸಮಾಜಕ್ಕೆ ಮಾದರಿಯಾಗಿರುವ ಕಾಮೇಗೌಡರು, ಹಿತ್ತಲಲ್ಲಿ ಏಕಾಂಗಿಯಾಗಿರುವುದು ನೋಡಿ ತುಂಬಾ ನೋವಾಯಿತು. ಕಾಲಿನ ಗಾಯದಿಂದ ನರಳುತ್ತಿದ್ದರೂ ಅವರಲ್ಲಿರುವ ಅದಮ್ಯ ಚೇತನ ಸ್ಫೂರ್ತಿದಾಯಕವಾಗಿದೆ. ತಮ್ಮ ಏಕಾಂತವಾಸಕ್ಕೆ ಕಾಮೇಗೌಡರು ಸಮರ್ಥನೆ ನೀಡಿದರು. ಆದರೂ, ಕಾಮೇಗೌಡರ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಾಗಿದೆ.
-ಮಹೇಂದ್ರ, ಅಧ್ಯಕ್ಷರು, ಚಾಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ

Writer - ಕುಂಟನಹಳ್ಳಿ ಮಲ್ಲೇಶ

contributor

Editor - ಕುಂಟನಹಳ್ಳಿ ಮಲ್ಲೇಶ

contributor

Similar News