ಕೊರೋನ ಪರೀಕ್ಷೆ: ಟ್ರಂಪ್ ಸರಕಾರದ ನಿಲುವಿಗೆ 33 ರಾಜ್ಯಗಳು ವಿರೋಧ

Update: 2020-08-30 16:45 GMT

ವಾಶಿಂಗ್ಟನ್, ಆ. 30: ಅಭೂತಪೂರ್ವ ಕ್ರಮವೊಂದರಲ್ಲಿ, ಅಮೆರಿಕದ ಟ್ರಂಪ್ ಆಡಳಿತದ ನೂತನ ಕೋವಿಡ್-19 ಪರೀಕ್ಷಾ ಮಾರ್ಗದರ್ಶಿ ಸೂತ್ರಗಳನ್ನು 33 ರಾಜ್ಯಗಳು ತಿರಸ್ಕರಿಸಿವೆ.

ಜನರು ಕೋವಿಡ್-19 ರೋಗಿಗಳ ಸಂಪರ್ಕಕ್ಕೆ ಬಂದರೂ, ಅವರಲ್ಲಿ ರೋಗ ಲಕ್ಷಣಗಳಿಲ್ಲದಿದ್ದರೆ ಹಾಗೂ ಸುಲಭವಾಗಿ ರೋಗಕ್ಕೆ ಗುರಿಯಾಗುವ ಗುಂಪಿಗೆ ಅವರು ಸೇರಿರದಿದ್ದರೆ ಅಥವಾ ಅವರು ಪರೀಕ್ಷೆಗೆ ಒಳಗಾಗಬೇಕೆಂದು ಅವರ ಶುಶ್ರೂಕರು ಅಥವಾ ಸರಕಾರ ಅಥವಾ ಸ್ಥಳೀಯ ಸರಕಾರಿ ಆರೋಗ್ಯ ಅಧಿಕಾರಿಗಳು ಶಿಫಾರಸು ಮಾಡಿರದಿದ್ದರೆ, ಅಂಥವರು ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಸೋಮವಾರ ಹೇಳಿತ್ತು.

ಆದರೆ, ಕೋವಿಡ್-19 ರೋಗಿಗಳ ಸಂಪರ್ಕಕ್ಕೆ ಬಂದವರು, ಅವರಲ್ಲಿ ರೋಗ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆಗೆ ಒಳಪಡಬೇಕು ಎಂಬುದಾಗಿ ಅಮೆರಿಕದ 50 ರಾಜ್ಯಗಳ ಪೈಕಿ ಕನಿಷ್ಠ 33 ರಾಜ್ಯಗಳು ಶಿಫಾರಸು ಮಾಡಿವೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

16 ರಾಜ್ಯಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಹಾಗೂ ತಾನು ಈ ವಿಷಯದಲ್ಲಿ ನಿರ್ಧಾರವೊಂದನ್ನು ತೆಗೆದುಕೊಂಡಿಲ್ಲ ಎಂದು ನಾರ್ತ್ ಡಕೋಟ ರಾಜ್ಯ ಹೇಳಿದೆ.

ಕೇಂದ್ರ ಸರಕಾರದ ನಿಲುವಿಗೆ ವಿರುದ್ಧ ತೀರ್ಮಾನವನ್ನು ತೆಗೆದುಕೊಂಡಿರುವ ರಾಜ್ಯಗಳಲ್ಲಿ ಬಲಪಂಥೀಯ ಧೋರಣೆಯ ಟೆಕ್ಸಾಸ್, ಓಕ್ಲಹೋಮ ಮತ್ತು ಆ್ಯರಿರೆನಗಳು ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News