ಪ್ರತಿಭಟನಾಕಾರರು, ಅಧ್ಯಕ್ಷ ಟ್ರಂಪ್ ಬೆಂಬಲಿಗರ ನಡುವೆ ಘರ್ಷಣೆ: ಓರ್ವ ಸಾವು

Update: 2020-08-30 16:53 GMT

ಪೋರ್ಟ್‌ಲ್ಯಾಂಡ್ (ಅಮೆರಿಕ), ಆ. 30: ಅಮೆರಿಕದ ಓರಿಗನ್ ರಾಜ್ಯದ ಪೋರ್ಟ್‌ಲ್ಯಾಂಡ್ ನಗರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಮತ್ತು ‘ಬ್ಲಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನಾಕಾರರ ನಡುವೆ ನಡೆದ ಶನಿವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಂಪ್ ಬೆಂಬಲಿಗರ 600 ವಾಹನಗಳ ಸಾಲು ಹಾದುಹೋಗುತ್ತಿರುವಾಗ ಈ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಮೂರು ಬಾರಿ ಗುಂಡು ಹಾರಿದ ಸದ್ದನ್ನು ಅಸೋಸಿಯೇಟಡ್ ಪ್ರೆಸ್ ಸುದ್ದಿಸಂಸ್ಥೆಯ ಪ್ರತಿನಿಧಿಯೊಬ್ಬರು ಕೇಳಿದ್ದಾರೆ ಹಾಗೂ ಬಳಿಕ ಕೆಳಗೆ ಬಿದ್ದಿರುವ ವ್ಯಕ್ತಿಯೊಬ್ಬನನ್ನು ಪೊಲೀಸರು ಉಪಚರಿಸುತ್ತಿರುವುದನ್ನು ನೋಡಿದ್ದಾರೆ. ಕೆಳಗೆ ಬಿದ್ದ ವ್ಯಕ್ತಿಯು ‘ಪ್ಯಾಟ್ರಿಯಟ್ ಪ್ರೇಯರ್’ ಎಂಬ ಲಾಂಛನ ಹೊಂದಿದ್ದ ಟೊಪ್ಪಿಯನ್ನು ಧರಿಸಿದ್ದರು. ಪ್ಯಾಟ್ರಿಯಟ್ ಪ್ರೇಯರ್ ಎನ್ನುವುದು ಬಲಪಂಥೀಯ ಸಂಘಟನೆಯಾಗಿದ್ದು, ಈ ಹಿಂದೆ ಅದರ ಸದಸ್ಯರು ಪೋರ್ಟ್‌ಲ್ಯಾಂಡ್‌ನಲ್ಲಿ ಪದೇ ಪದೇ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನಕಾರರೊಂದಿಗೆ ಸಂಘರ್ಷ ನಡೆಸಿದ್ದರು.

ಮೂರು ತಿಂಗಳ ಹಿಂದೆ ಮಿನಪೊಲಿಸ್ ನಗರದಲ್ಲಿ ಪೊಲೀಸರು ಆಫ್ರಿಕ ಮೂಲದ ಜಾರ್ಜ್ ಫ್ಲಾಯ್ಡಾರನ್ನು ಉಸಿರುಗಟ್ಟಿಸಿ ಕೊಂದಂದಿನಿಂದ, ಪೋರ್ಟ್‌ಲ್ಯಾಂಡ್‌ನಲ್ಲಿ ಪ್ರತಿ ರಾತ್ರಿ ಪ್ರತಿಭಟನೆಗಳು ನಡೆಯುತ್ತಿವೆ.

ಪ್ರತಿಭಟನೆಗಳ ವೇಳೆ ಆಗಾಗ ಹಿಂಸಾಚಾರ ಸಂಭವಿಸುತ್ತಿದ್ದು, ಪೊಲೀಸರು ಈವರಗೆ ನೂರಾರು ಮಂದಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News