ಬಿಜೆಪಿಯಿಂದ ಕೊರೋನ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಲೂಟಿ: ರಿಝ್ವಾನ್ ಅರ್ಷದ್
ಮೈಸೂರು, ಆ.31: ಕೊರೋನ ಹಾವಳಿ ಬಿಜೆಪಿಯವರಿಗೆ ದೊಡ್ಡ ಹಬ್ಬವಾಗಿದೆ. ಹಾಗಾಗಿ ಕೊರೋನ ಹೆಸರಿನಲ್ಲಿ ಸಾಕಷ್ಟು ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಶಿವಾಜಿ ನಗರದ ಶಾಸಕ ರಿಝ್ವಾನ್ ಅರ್ಷದ್ ಆರೋಪಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಕ್, ಗ್ಲೌಸ್, ಪಿಪಿಇ ಕಿಟ್, ಥರ್ಮಲ್ ಸ್ಕ್ಯಾನಿಂಗ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಮಾಡುತ್ತಿದ್ದಾರೆ. ಜೊತೆಗೆ ಕೋವುಡ್ ಸೆಂಟರ್ ಗಳನ್ನು ಮಾಡಿ ಅಲ್ಲಿಗೆ ಮಂಚ, ಹಾಸಿಗೆ, ದಿಂಬು ಹೆಸರಿನಲ್ಲೂ ದುಡ್ಡು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಇವರು ಅಧರ್ಮವನ್ನು ಮಾಡುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿರುವ ಇವರು ಉಪಚುನಾವಣೆಯಲ್ಲಿ ಒಂದೊಂದು ಕ್ಷೇತ್ರಕ್ಕೂ 40ರಿಂದ 50 ಕೋಟಿ ರೂ. ಖರ್ಚು ಮಾಡಿದ್ದಾರೆ. ಆ ಹಣವನ್ನೆಲ್ಲಾ ಕೊರೋನ ಹೆಸರಿನಲ್ಲಿ ದೋಚುತ್ತಿದ್ದಾರೆ ಎಂದು ಹರಿಹಾಯ್ದರು.
ದೇಶಾದ್ಯಂತ ಕೊರೋನ ವ್ಯಾಪಕವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. 21 ದಿನಗಳಲ್ಲಿ ಕೊರೋನ ಹೋಗಲಾಡಿಸುತ್ತೇನೆ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಇದೀಗ ಕೊರೋನ ಹೆಚ್ಚಳದ ಕುರಿತು ಮಾತನಾಡುತ್ತಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದ್ದರೂ ಒಂದು ಮಾತನ್ನು ಪ್ರಧಾನಿ ಆಡುತ್ತಿಲ್ಲ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೆಲ್ಲಾ ದೇವರ ಆಟ ಎಂದು ಹೇಳುತ್ತಾರೆ. ಹಾಗಿದ್ದ ಮೇಲೆ ಸರ್ಕಾರ ನಡೆಸಲು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಜನರ ಸಾವಿನಲ್ಲೂ ಬಿಜೆಪಿಯವರು ದುಡ್ಡು ಮಾಡುತ್ತಿದ್ದಾರೆ. ಕೊರೋನ ನಿರ್ವಹಣೆ ಕುರಿತು ಲೆಕ್ಕ ಕೊಡಿ ಎಂದು ನಮ್ಮ ನಾಯಕರಾದ ಸಿದ್ದರಾಮಯ್ಯ 5 ಬಾರಿ ಪತ್ರ ಬರೆದಿದ್ದರೂ ಲೆಕ್ಕ ಕೊಡುತ್ತಿಲ್ಲ, ಇವರಿಗೆ ಇನ್ಯಾವ ರೀತಿ ಕೇಳಬೇಕೊ ಅರ್ಥ ಆಗುತ್ತಿಲ್ಲ. ಇವರ ಹಗರಣದ ದಾಖಲೆಯನ್ನು ಸಧ್ಯದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ ಎಂದು ರಿಝ್ವಾನ್ ಅರ್ಷದ್ ಹೇಳಿದರು.
ಡ್ರಗ್ಸ್ ಮಾಫಿಯಾ ಈ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡರು ಕಾಂಗ್ರೆಸ್ ಸ್ವಾಗತ ಮಾಡುತ್ತದೆ ಎಂದು ರಿಝ್ವಾನ್ ಅರ್ಷದ್ ಹೇಳಿದರು.
ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಘಟನೆಗೆ ಸರ್ಕಾರದ ವೈಫಲ್ಯವೇ ಕಾರಣ. ಶಾಸಕರ ಮನೆ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತಾರೆ ಎಂದರೆ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ರಿಝ್ವಾನ್ ಹರ್ಷದ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಲಕ್ಷ್ಮಣ್, ಅಯ್ಯೂಬ್ ಖಾನ್, ಶಿವಣ್ಣ ಉಪಸ್ಥಿತರಿದ್ದರು.