×
Ad

ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ: ನೆಲಕ್ಕುರುಳಿದ ಬೃಹತ್ ಮರಗಳು

Update: 2020-08-31 17:02 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರವಿವಾರ ತಡರಾತ್ರಿ ಗುಡುಗು, ಭಾರೀ ಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದು, ಗಾಳಿಯ ರಭಸಕ್ಕೆ ಐದಾರು ಬೃಹತ್ ಮರಗಳು ನೆಲಕ್ಕುರುಳಿವೆ. ಒಂದು ಆಟೊ ಜಖಂಗೊಂಡಿದೆ.

ನಗರದ ಮೆಜೆಸ್ಟಿಕ್, ನಾಗರಬಾವಿ ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್‍ಆರ್ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿಯೇ ಇತ್ತು. ಧಾರಾಕಾರ ಮಳೆಯ ಜತೆಗೆ ಗಾಳಿಯ ವೇಗವೂ ಹೆಚ್ಚಾಗಿತ್ತು.

ಇಲ್ಲಿನ 139ನೇ ವಾರ್ಡ್ ಜೆಜೆ ನಗರದ ಮುಖ್ಯರಸ್ತೆಯಲ್ಲಿನ ಮರ, ಐಐಎಸ್ ಸಿಬಿಎಲ್ ರಸ್ತೆ ಹಾಗೂ ಕೆಆರ್ ಪುರಂ 52 ವಾರ್ಡಿನಲ್ಲಿ ಐದಾರು ಮರಗಳು ನೆಲಕ್ಕುರುಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಅದೇ ರೀತಿ, ಕಾಟನ್ ಪೇಟೆ ಟ್ಯಾಂಕ್ ಬಂಡ್ ರಸ್ತೆಯಲ್ಲಿ ರಾತ್ರಿ ತೀವ್ರ ಗಾಳಿ ಮಳೆಗೆ ಮರವೊಂದು ಧರೆಗುರುಳಿದ್ದು, ಆಟೊರಿಕ್ಷಾದ ಮೇಲೆ ಬಿದ್ದು, ಆಟೋ ಜಖಂ ಆಗಿದೆ. ಚಾಲಕ ಮತ್ತು ಪ್ರಯಾಣಿಕರನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ರಕ್ಷಿಸಿದ್ದಾರೆ. ತೀವ್ರ ಪ್ರಮಾಣದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಿಗೂ ಅಧಿಕ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗುಡುಗು, ಸಿಡಿಲು ಸಹಿತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಸದರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎಚ್ಚರ ವಹಿಸುವಂತೆ ಇಲಾಖೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News