ನ್ಯಾಯಾಂಗ ವ್ಯವಸ್ಥೆಯ ಅಣಕ: ಪ್ರಶಾಂತಿ ಭೂಷಣ್ ಪ್ರಕರಣದ ಬಗ್ಗೆ ಎಸ್‍ಯುಸಿಐ

Update: 2020-08-31 13:05 GMT

ಬೆಂಗಳೂರು, ಆ. 31: ನಾಗರಿಕರ ಹಕ್ಕುಗಳನ್ನು ಕಾಪಾಡಲು ನಿರ್ಭೀತಿಯಿಂದ ಹೋರಾಡುತ್ತಿರುವ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ವಿಷಯದಲ್ಲಿ ಸುಪ್ರಿಂ ಕೋರ್ಟ್ ಅನ್ಯಾಯ ಮಾಡಿರುವುದು ಅತ್ಯಂತ ಆಘಾತದ ವಿಷಯವಾಗಿದೆ. ನ್ಯಾಯಾಂಗ ವ್ಯವಸ್ಥೆಯ ಈ ಅಣಕವನ್ನು ಖಂಡಿಸಲು ಪದಗಳು ಸಾಕಾಗುವುದಿಲ್ಲ ಎಂದು ಎಸ್‍ಯುಸಿಐ ಟೀಕಿಸಿದೆ.

ಸುಪ್ರೀಂ ಕೋರ್ಟ್ ಮತ್ತು ಇತರೆ ಹೈಕೋರ್ಟ್‍ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಮಾಜಿ ನ್ಯಾಯಾಧೀಶರು, ನ್ಯಾಯವಾದಿಗಳು, ಚಿಂತಕರು ಮತ್ತು ಶಿಕ್ಷಣತಜ್ಞರು ಸೇರಿ ದೇಶದ ಸಾವಿರಾರು ನಾಗರಿಕರ ಪ್ರತಿಭಟನೆಯನ್ನು ನಿರ್ಲಕ್ಷಿದೆ. ಈಗಿನ ದಿನಗಳಲ್ಲಿ ಎಲ್ಲ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ದೇಶಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವವು ಒಂದು ಫ್ಯಾಶಿಸ್ಟ್, ನಿರಂಕುಶವಾದವಾಗಿ ಮಾರ್ಪಟ್ಟಿರುವುದರಿಂದ, ಬೂರ್ಜ್ವಾ ಪಾರ್ಲಿಮೆಂಟರಿ ಪ್ರಜಾತಂತ್ರವು ಒಂದು ಕಾಲದಲ್ಲಿ ಎತ್ತಿ ಹಿಡಿದ `ನ್ಯಾಯಾಂಗದ ಸ್ವಾತಂತ್ರ್ಯ'ವನ್ನು ಹೇಗೆ ಆಳುವ ವರ್ಗ ಮತ್ತು ಪಕ್ಷಕ್ಕೆ ಸಂಪೂರ್ಣವಾಗಿ ಅಧೀನವಾಗಿರುವ ನ್ಯಾಯ ವ್ಯವಸ್ಥೆಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ರಾಜ್ಯ ಸಮಿತಿಯ ಎಂ.ಎನ್. ಶ್ರೀರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ, ನ್ಯಾಯಾಂಗ ವ್ಯವಸ್ಥೆಯನ್ನು ಅಧೀನದಲ್ಲಿ ಇರಿಸಿಕೊಳ್ಳಲಾಗಿತ್ತು. ಈಗ ಬಿಜೆಪಿ ಆಡಳಿತದಲ್ಲಿ ಅದನ್ನು `ನೀಡಿದ ಆಜ್ಞೆಯನ್ನು ಪಾಲಿಸುವಂತೆ' ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಮರಣಾವಸ್ಥೆಯ ಸ್ವರೂಪ ಹೀಗಿದೆ. ತನ್ನ ಆರಂಭದ ದಿನಗಳಲ್ಲಿ ಅದು ಏನನ್ನು ಕಾಪಾಡಿತ್ತೋ ಅದನ್ನೆಲ್ಲ ಈಗ ಧ್ವಂಸ ಮಾಡಲಾಗುತ್ತಿದೆ. `ನೀವು ಈ ಲಕ್ಷ್ಮಣ ರೇಖೆಯನ್ನು ದಾಟಬಾರದು' ಎಂಬ ಹೇಳಿಕೆಯೇ ಎಲ್ಲ ಸ್ವತಂತ್ರ ದನಿಗಳ ಹುಟ್ಟಡಗಿಸುವ ಬೆದರಿಕೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಇದು ಒಂದು ಅತ್ಯಂತ ಗಾಬರಿ ಹುಟ್ಟಿಸುವ ಪರಿಸ್ಥಿತಿಯಾಗಿದೆ. ಸಮಾಜದ ಎಲ್ಲ ಸ್ತರಗಳ ಪ್ರಜಾತಂತ್ರಪ್ರೇಮಿ ಜನರು ಒಗ್ಗಟ್ಟಾಗಿ, ಒಂದು ಪ್ರಬಲ ದೇಶವ್ಯಾಪಿ ಪ್ರತಿರೋಧದ ಹೋರಾಟ ಕಟ್ಟುವುದು ಈ ಹೊತ್ತಿನ ಅವಶ್ಯಕತೆ. ಭಾರತದ ನವೋದಯ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಮಹನೀಯರ ಧೀರೋದಾತ್ತ ಹೋರಾಟ ಮತ್ತು ತ್ಯಾಗಗಳಿಂದ ಸ್ಫೂರ್ತಿ ಪಡೆದು, ಈ ಪರಿಸ್ಥಿತಿಗೆ ಸೂಕ್ತ ಪ್ರತಿಕ್ರಿಯೆ ನೀಡಬೇಕೆಂದು ಎಸ್‍ಯುಸಿಐ ಪ್ರಕಟಣೆಯಲ್ಲಿ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News