ಸೆ.7ರಿಂದ ಮೆಟ್ರೋ ರೈಲು ಸಂಚಾರ, ಸೆ.21ರ ಬಳಿಕ ಸಭೆ-ಸಮಾರಂಭಗಳಿಗೆ ಅವಕಾಶ

Update: 2020-08-31 13:09 GMT

ಬೆಂಗಳೂರು, ಆ. 31: ಕೋವಿಡ್-19 ಅನ್‍ಲಾಕ್-4 ಮಾರ್ಗಸೂಚಿಯನ್ನು ಕೇಂದ್ರ ಸರಕಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಸೆಪ್ಟಂಬರ್ 7ರಿಂದ ಮೆಟ್ರೋ ರೈಲು ಸಂಚಾರ ಆರಂಭವಾಗಲಿದ್ದು, ಶಾಲಾ-ಕಾಲೇಜು ಸೆ.30ರವರೆಗೆ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೋಮವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕಂಟೈನ್ಮೆಂಟ್ ಝೋನ್‍ಗಳಲ್ಲಿ ಸೆ.30ರವರೆಗೆ ನಿರ್ಬಂಧ ಮುಂದುವರಿಸಿದೆ. ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ರಾಜಕೀಯ ಹಾಗೂ ಧಾರ್ಮಿಕ ಸಮಾರಂಭಗಳು ಸೇರಿದಂತೆ ಇತರೆ ಸಭೆ-ಸಮಾರಂಭಗಳಿಗೆ ಗರಿಷ್ಠ 100 ಮಂದಿಯ ಪರಿಮಿತಿಗೊಳಪಟ್ಟು ಸೆಪ್ಟಂಬರ್ 21ರಿಂದ ಅನ್ವಯವಾಗುವಂತೆ ಅನುಮತಿ ನೀಡಲಾಗಿದೆ.

ಅಲ್ಲದೆ, ಮದುವೆ ಸಮಾರಂಭದಲ್ಲಿ ಅತಿಥಿಗಳ ಸಂಖ್ಯೆ, ಅಂತ್ಯ ಸಂಸ್ಕಾರ ಸಂಬಂಧಿಸಿದಂತೆ ಈ ವೇಳೆ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜರ್ ವ್ಯವಸ್ಥೆ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸೆ.20ರಿಂದ ಕಂಟೈನ್ಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಮಾತ್ರ ಆನ್‍ಲೈನ್ ಬೋಧನೆ, ಟೆಲಿ ಸಮಾಲೋಚನೆಗಾಗಿ ಶಾಲೆಗೆ ಶೇ.50ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕರೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕಂಟೈನ್ಮೆಂಟ್ ವಲಯಗಳನ್ನು ಹೊರತು ಉಳಿದೆಡೆ ಸೆ.21ರಿಂದ ಅನ್ವಯವಾಗುವಂತೆ 9ನೆ ತರಗತಿಯಿಂದ 12ನೆ ತರಗತಿಯ ವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ ಮಾತ್ರ ಸ್ವಇಚ್ಛೆಯಿಂದ ಆಧಾರದ ಮೇಲೆ ಶಾಲೆಗಳಿಗೆ ಭೇಟಿ ನೀಡಬಹುದು. ಇದು ಅವರ ತಂದೆ-ತಾಯಿ ಮತ್ತು ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನಿರ್ಬಂಧ: ಚಿತ್ರಮಂದಿಗಳು, ಈಜುಕೊಳಗಳು, ಮನರಂಜನೆ ಉದ್ಯಾನವನಗಳು, ರಂಗಮಂದಿರಗಳನ್ನು ತೆರೆಯಲು ನಿರ್ಬಂಧ ಹೇರಲಾಗಿದೆ. ಆದರೆ, ಬಯಲು ರಂಗಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯ ನೀಡಿರುವ ಅನುಮತಿ ಹೊರತುಪಡಿಸಿ ಅಂತರರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿರ್ಬಂಧ ಮುಂದುವರಿಸಲಾಗಿದೆ. ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ವ್ಯಕ್ತಿಗಳ ಓಡಾಟಕ್ಕೆ ಮತ್ತು ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿಲ್ಲ. ಜೊತೆಗೆ ಹೊರ ರಾಜ್ಯದಿಂದ ಆಗಮಿಸುವವರಿಗೆ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಸೂಚಿಸಲಾಗಿದೆ.

ರಾಷ್ಟ್ರೀಯ ಕೌಶಲ್ಯ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಗಳು ಸೇರಿದಂತೆ ನೋಂದಾಯಿಸಿಕೊಂಡ ಅಲ್ಪಾವಧಿ ತರಬೇತಿ ಕೇಂದ್ರದಲ್ಲಿ ಉದ್ಯಮಶೀಲತೆ ತರಬೇತಿಯನ್ನು ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ಧತಿಯನ್ನು ಅನುಸರಿಸಬೇಕು. ಕಚೇರಿಯಲ್ಲಿ, ಕೆಲಸದ ಸ್ಥಳದಲ್ಲಿ, ಅಂಗಡಿಯಲ್ಲಿ, ಮಾರುಕಟ್ಟೆಯಲ್ಲಿ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ವ್ಯವಹಾರದ ಸಮಯದಲ್ಲಿ ಪಾಳಿ ಪದ್ಧತಿ ಅನುಸರಿಸಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

ಕೋವಿಡ್-19 ಸೋಂಕು ನಿಯಂತ್ರಣ ದೃಷ್ಟಿಯಿಂದ ಎಲ್ಲ ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಮತ್ತು ಸಾಮಾನ್ಯ ಪ್ರದೇಶದಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್, ಕೈ ತೊಳೆಯುವುದಕ್ಕೆ ಸ್ಯಾನಿಟೈಸರ್‍ಗೆ ವ್ಯವಸ್ಥೆ ಕಲ್ಪಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೆ, ಎಲ್ಲರೂ ಮಾಸ್ಕ್ ಧರಿಸಿರಬೇಕು ಎಂದು ಸರಕಾರದ ಆದೇಶದಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News