×
Ad

ಶ್ರೇಷ್ಠ ನೇತಾರನನ್ನು ಕಳೆದುಕೊಂಡ ಅನಾಥ ಪ್ರಜ್ಞೆ ಇಡೀ ದೇಶಕ್ಕೆ ಆವರಿಸಿದೆ: ಸಿಎಂ ಯಡಿಯೂರಪ್ಪ

Update: 2020-08-31 20:14 IST

ಬೆಂಗಳೂರು, ಆ. 31: ಮಾಜಿ ರಾಷ್ಟ್ರಪತಿ, ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಪ್ರಣವ್ ಮುಖರ್ಜಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸರ್ವಾದರಣೀಯ ನಾಯಕ: `ಧೀಮಂತ ರಾಜಕಾರಣಿ, ಭಾರತದ ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣವ್ ಮುಖರ್ಜಿ ವಿಧಿವಶರಾದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಶ್ರೇಷ್ಠ ನೇತಾರರನ್ನು ಕಳೆದುಕೊಂಡ ಅನಾಥ ಪ್ರಜ್ಞೆ ಇಡೀ ದೇಶಕ್ಕೆ ಆವರಿಸಿದೆ. ಅವರೊಂದಿಗೆ ನನ್ನ ಒಡನಾಟದ ಕ್ಷಣಗಳನ್ನು ನೆನೆಯುತ್ತಾ, ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

'ಪ್ರಣವ್ ರವರ ಸೇವೆ, ಸಾಧನೆಗಳು ಅನನ್ಯ. ದಶಕಗಳ ಕಾಲ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಣಿಜ್ಯ, ವಿದೇಶಾಂಗ, ಹಣಕಾಸು, ರಕ್ಷಣಾ ಸಚಿವರಾಗಿ ಅವರು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರು. ರಾಷ್ಟ್ರಪತಿಗಳಾಗಿ ಅವರು ದೇಶದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು' ಎಂದು ಯಡಿಯೂರಪ್ಪ ಸ್ಮರಿಸಿದ್ದಾರೆ.

'ಪ್ರಣವ್ ಅವರಷ್ಟು ಸುದೀರ್ಘ ಕಾಲ ಆಡಳಿತದ ಕೇಂದ್ರ ಸ್ಥಾನದಲ್ಲಿದ್ದು, ಪ್ರಾಮಾಣಿಕವಾಗಿ, ಕಳಂಕರಹಿತರಾಗಿ ಸೇವೆ ಸಲ್ಲಿಸಿದ ಮತ್ತೋರ್ವ ಸರ್ವಾದರಣೀಯ ನಾಯಕ ಇರಲಾರರು. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ದಯಪಾಲಿಸಲಿ, ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ!' ಎಂದು ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ದೇಶ ಸದಾ ಋಣಿ: ಮಾಜಿ ರಾಷ್ಟ್ರಪತಿಗಳು, ಕೇಂದ್ರದ ಮಾಜಿ ಸಚಿವರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಪ್ರಣವ್ ಮುಖರ್ಜಿ ಅವರ ನಿಧನನದ ಸುದ್ಧಿ ಅತೀವ ದುಃಖವನ್ನುಂಟು ಮಾಡಿದೆ. ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಗಳ ಸಚಿವರಾಗಿ ಅವರು ಮಾಡಿದ ಸಾಧನೆಗೆ ದೇಶ ಸದಾ ಋಣಿಯಾಗಿದೆ. ಅವರ ಕುಟುಂಬ ಮತ್ತು ಬಂಧು-ಮಿತ್ರರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

'ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹಿರಿಯ ರಾಜಕಾರಣಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸುತ್ತಿದ್ದೇನೆ. ಇಂತಹ ಮಹಾನ್ ಚೇತನದ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟ. ಸೌಮ್ಯ ವ್ಯಕ್ತಿತ್ವದ ಅವರು ಈ ದೇಶ ಕಂಡ ಅಪರೂಪದ ರಾಜಕಾರಣಿ. ಪಕ್ಷಾತೀತವಾಗಿ ಎಲ್ಲರ ಪ್ರೀತಿಗೆ ಭಾಜನರಾಗಿದ್ದ ಅವರ ರಾಜಕೀಯ ಆದರ್ಶ ಎಲ್ಲರಿಗೂ ಮಾದರಿಯಾಗಿತ್ತು. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತ ಕಂಡ ಅಪರೂಪದ ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸತತ ಐದು ದಶಕಗಳ ಕಾಲ ಸಂಸದರಾಗಿ, ಕೇಂದ್ರ ಸರಕಾರದಲ್ಲಿ ವಿವಿಧ ಖಾತೆ ನಿರ್ವಹಿಸಿದ್ದ ಪ್ರಣವ್, ವಿದೇಶಾಂಗ ಹಾಗೂ ಹಣಕಾಸು ಸಚಿವರಾಗಿ ರಾಷ್ಟ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಪ್ರಣವ್ ಮುಖರ್ಜಿ ಭಾರತ ಕಂಡ ಸರ್ವಶ್ರೇಷ್ಟ ಆರ್ಥಿಕ ತಜ್ಞರೂ ಹೌದು. ಕಳೆದ ವರ್ಷ ‘ಭಾರತ ರತ್ನ’ ಪುರಸ್ಕಾರ ಪಡೆದಿದ್ದ ಪ್ರಣವ್ ಮುಖರ್ಜಿ ಅಗಲಿಕೆಯಿಂದ ಭಾರತ ಅಮೂಲ್ಯವಾದ ‘ರತ್ನ’ ಕಳೆದುಕೊಂಡಂತಾಗಿದೆ. ಪ್ರಣವ್ ದಾದಾರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಾರ್ಥಿಸಿದ್ದಾರೆ.

ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ, ದೇಶಕ್ಕೆ ಉತ್ತಮ ಸೇವೆ ಹಾಗೂ ಆಡಳಿತ ನೀಡಿದಂತಹ ಪ್ರಣವ್ ಮುಖರ್ಜಿ ನಿಧನ ನಮ್ಮ ಪಕ್ಷಕ್ಕೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟ. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಪ್ರಾರ್ಥಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ಬಿ.ಶ್ರೀರಾಮುಲು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಅಗಲಿದ ಗಣ್ಯರ ಜೊತೆಗಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ.

ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಶಸ್ತಿ ಪುರಸ್ಕೃತ ಪ್ರಣವ್ ಮುಖರ್ಜಿ ಅವರು ವಿಧಿವಶರಾದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಿ ಕುಟುಂಬ ವರ್ಗದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ'

-ನಳೀನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

ಗಾಂಧಿ ಚಿಂತನೆಯನ್ನು ಆಳವಡಿಸಿಕೊಂಡಿದ್ದ ಪ್ರಣವ್ ಮುಖರ್ಜಿ ಅವರು `ಮ್ಯಾನ್ ಆಫ್ ಆಲ್ ಸೀಜನ್ಸ್' ಎಂದೇ ಬಣ್ಣಿಸಲಾಗುತ್ತಿತ್ತು. ಇತಿಹಾಸ, ಸಂವಿಧಾನ ಹಾಗೂ ಕಾನೂನಿನ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದ ಮಹಾನ್ ನಾಯಕನನ್ನು ನಾವಿಂದು ಕಳೆದುಕೊಂಡಿದ್ದೇವೆ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News