×
Ad

ಸೆ.1ರಿಂದ ರಾಜ್ಯದಲ್ಲಿ ಕ್ಲಬ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ ಆರಂಭ

Update: 2020-08-31 21:48 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 31: ಕೇಂದ್ರ ಸರಕಾರ ಕೊರೋನ ಸೋಂಕು ನಿಯಂತ್ರಣ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ `ಅನ್‍ಲಾಕ್-4' ಮಾರ್ಗಸೂಚಿ ಪ್ರಕಟಿಸಿದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಅಬಕಾರಿ ಇಲಾಖೆ ಐದು ತಿಂಗಳಿಂದ ಮುಚ್ಚಿದ್ದ ಊಟೋಪಚಾರದೊಂದಿಗೆ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವ ಕ್ಲಬ್, ಪಬ್, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ನಾಳೆ(ಸೆ.1)ಯಿಂದ ಆರಂಭಿಸಲು ಅಧಿಸೂಚನೆ ಹೊರಡಿಸಿದೆ.

ಮದ್ಯ ಪೂರೈಕೆ ಸಂದರ್ಭದಲ್ಲಿ ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕ್ಲಬ್, ಪಬ್, ಬಾರ್ ಮತ್ತು ರೆಸ್ಟೋರೆಂಟ್‍ಗಳ ಆಸನ ಸಾಮರ್ಥ್ಯವನ್ನು ಆಧರಿಸಿ ಆ ಪೈಕಿ ಶೇ.50ರಷ್ಟು ಗ್ರಾಹಕರನ್ನು ಮಾತ್ರ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದ್ದು, ಅದಕ್ಕಿಂತ ಹೆಚ್ಚು ಗ್ರಾಹಕರನ್ನು ಯಾವುದೇ ಕಾರಣಕ್ಕೂ ಅವಕಾಶ ನೀಡುವಂತಿಲ್ಲ ಎಂದು ನಿರ್ದೇಶಿಸಲಾಗಿದೆ.

ಸಿಎಲ್-4, ಸಿಎಲ್-6ಎ, ಸಿಎಲ್-7, ಸಿಎಲ್-7ಎ, ಸಿಎಲ್-7ಬಿ, ಸಿಎಲ್-9, ಸಿಎಲ್-17, ಸಿಎಲ್-18, ವೈನ್ ಟಾವರಿನ್, ಬಾಟಲ್ಡ್ ಬಿಯರ್, ಆರ್‍ವಿಬಿ(ಪಬ್) ಮತ್ತು ಮೈಕ್ರೋಬ್ರೀವರಿ ಸನ್ನದ್ದುಗಳಲ್ಲಿ ರೆಸ್ಟೋರೆಂಟ್‍ಗಳಲ್ಲಿ ಮಾತ್ರ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಆಹಾರದೊಂದಿಗೆ ಮದ್ಯ ಸೇವನೆಗೆ ಅನುಮತಿ ನೀಡಿದೆ. ಯಾವುದೇ ಕಾರಣಕ್ಕೂ ಅಬಕಾರಿ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸುವುದು. ಒಂದು ವೇಳೆ ಯಾವುದೇ ಉಲ್ಲಂಘನೆಯಾದಲ್ಲಿ ಅಬಕಾರಿ ಕಾಯ್ದೆ-1965ರ ಕಲಂ 29ರ ಅನ್ವಯ ಸನ್ನದಿನ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಇಲಾಖೆ ಆದೇಶದಲ್ಲಿ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News