ಸಮುದಾಯ ದ್ವೇಷ ಹರಡಿದ ಸುದರ್ಶನ್ ಟಿವಿ ವಿರುದ್ಧ ಪ್ರಕರಣ ದಾಖಲಿಸಿ: ಎಸ್‍ಡಿಪಿಐ

Update: 2020-08-31 16:54 GMT

ಹೊಸದಿಲ್ಲಿ, ಆ.31: ದೇಶದ ಆಡಳಿತ ಮತ್ತು ಕಾನೂನಿನ ನಿಯಮಗಳು ಹಾಗೂ ಜಾತ್ಯತೀತ ಚಿಂತನೆಗಳ ಮೇಲೆ ಆಕ್ರಮಣ ನಡೆಸುವ ರೀತಿಯಲ್ಲಿ, ಸಮಾಜದಲ್ಲಿ ದ್ವೇಷ ಹರಡಲು ಪ್ರಸಾರವಾದ ಸುದರ್ಶನ್ ಟಿವಿಯ ಸುರೇಶ್ ಚವಾಂಕೆ ಅವರ ವಿಡಿಯೋ ಕ್ಲಿಪ್‍ ಖಂಡನೀಯ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಅಡ್ವಕೇಟ್ ಶರ್ಫುದ್ದೀನ್ ಅಹ್ಮದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯೋಗಿ ಸರಕಾರದ ಸರ್ವಾಧಿಕಾರಕ್ಕೆ ವಿರುದ್ಧವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ, ವಿಡಿಯೋ ಅಥವಾ ಟ್ವೀಟ್ ಹಾಕಿದವರನ್ನು ತಕ್ಷಣ ಬಂಧಿಸುವ ಬಿಜೆಪಿ ಸರಕಾರ, ದೇಶದ ಉನ್ನತ ಶ್ರೇಣಿಯ ಶೈಕ್ಷಣಿಕ ಸಂಸ್ಥೆ ಜಾಮಿಯಾ ಮಿಲಿಯಾದ ಪ್ರತಿಷ್ಠೆಗೆ ಧಕ್ಕೆ ತರುವ ವಿಡಿಯೊ ಕ್ಲಿಪ್ ಅನ್ನು ಪ್ರಸಾರ ಮಾಡಿದ ಸುದರ್ಶನ್ ಟಿವಿಯ ಚವಾಂಕೆ ಅವರ ಅತ್ಯಂತ ಗಂಭೀರ ಅಪರಾಧ ಕೃತ್ಯದ ಬಗ್ಗೆ ಯುಪಿ ಪೊಲೀಸರು ಮೌನವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

2020 ಆ.28ರ ರಾತ್ರಿ 8ಗಂಟೆಗೆ ಸುದರ್ಶನ್ ಟಿವಿಯಲ್ಲಿ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿ, ಮುಸ್ಲಿಮರು ದೇಶದ ನಾಗರಿಕ ಸೇವೆಯಲ್ಲಿ ಪ್ರವೇಶಿಸಿ ಭಾರತವನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ನಾಶಪಡಿಸುತ್ತಾರೆ ಎಂಬುದನ್ನು ವಿವರಿಸುವುದಾಗಿದೆ. ಚವಾಂಕೆ ಅವರು ಶ್ರೇಷ್ಠ ರಾಜಕೀಯ ವ್ಯಕ್ತಿಗಳು ಮತ್ತು ವ್ಯವಸ್ಥೆಯ ಖ್ಯಾತಿಯನ್ನು ಕುಂದಿಸಿರುವುದಲ್ಲದೆ, ಇಡೀ ಸರಕಾರಿ ಯಂತ್ರ, ದುರ್ಬಲ, ನಿಷ್ಪ್ರಯೋಜಕ ಮತ್ತು ವಿಶ್ವಾಸಾರ್ಹವಲ್ಲ ಎಂಬ ಬಗ್ಗೆ ಜನಸಾಮಾನ್ಯರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ ಅವರು ಉದ್ದೇಶಪೂರ್ವಕವಾಗಿ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

ಮುಸ್ಲಿಂ ಸಮುದಾಯದ ವಿರುದ್ಧ ಕೋಮು ಮತ್ತು ಧಾರ್ಮಿಕ ಹಗೆತನ ಮತ್ತು ದುರುದ್ದೇಶವನ್ನು ಪ್ರಚೋದಿಸಿದ್ದಕ್ಕಾಗಿ ಚವಾಂಕೆ ವಿರುದ್ಧ ತಕ್ಷಣ ಎಫ್‍ಐಆರ್ ದಾಖಲಿಸಬೇಕು ಹಾಗೂ ಶೀಘ್ರವೇ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಎಸ್‍ಡಿಪಿಐ ಪ್ರಕಟಣೆಯಲ್ಲಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News