'ಡ್ರಗ್ಸ್ ಮಾಫಿಯಾದಿಂದ ಸರಕಾರ ಬುಡಮೇಲು' ಹೇಳಿಕೆ: ಪುರಾವೆ ಒದಗಿಸಲು ಹೆಚ್‌ಡಿಕೆಗೆ ಸಚಿವ ಸುಧಾಕರ್ ಸವಾಲು

Update: 2020-08-31 17:06 GMT

ಬೆಂಗಳೂರು, ಆ.31: ಡ್ರಗ್ ಮಾಫಿಯಾ ಹಣ ನಮ್ಮ ಸರ್ಕಾರಕ್ಕೆ ಬಂದಿದೆ ಎಂಬ ಆರೋಪಕ್ಕೆ ಪುರಾವೆ ಒದಗಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಆದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ.

ಡ್ರಗ್ ಮಾಫಿಯಾದಿಂದ ತಮ್ಮ ಸರ್ಕಾರ ಬುಡಮೇಲಾಯಿತು ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಟ್ವೀಟ್ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, 'ನಾನು ಯಾವ ಮುಂಬೈಗೂ ಹೋಗಿಲ್ಲ. ಮಾಜಿ ಮುಖ್ಯಮಂತ್ರಿಗಳಾಗಿ ಇಂತಹ ಗಂಭೀರ ಆರೋಪ ಮಾಡಬಾರದು. ಆರೋಪ ಮಾಡಿದರೆ ಅದಕ್ಕೆ ಪುರಾವೆಯನ್ನೂ ನೀಡಬೇಕು. ಬಿಜೆಪಿ ಅಂತಹ ಅನೈತಿಕ ಕೆಲಸವನ್ನೂ ಎಂದೂ ಮಾಡಿಲ್ಲ. ನನ್ನ ಅರ್ಹತೆ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ನಿರ್ಣಯಿಸುತ್ತಾರೆ. ತಾವು ತಲೆ ಕೆಡಿಸಿಕೊಳ್ಳುವ ಅಗತ್ಯವೇನಿದೆ?" ಎಂದು ಪ್ರಶ್ನಿಸಿದ್ದಾರೆ.

"ನಾನು ಮಾಜಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯ ಮಗನಲ್ಲ. ಶಾಲಾ ಶಿಕ್ಷಕನ ಮಗನಾಗಿ ಸ್ವಸಾಮರ್ಥ್ಯದಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ನಾನೆಂದೂ ಯಾರ ಹೆಸರಿನಲ್ಲೂ ರಾಜಕೀಯ ಮಾಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

"ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಮುಖ್ಯಮಂತ್ರಿಗಳಾದಿರಿ ಎಂಬ ಬಗ್ಗೆಯೂ ಒಮ್ಮೆ ತಮ್ಮನ್ನು ಕೇಳಬಹುದೇ? ಪಕ್ಕದಲ್ಲಿ ಧರಂ ಸಿಂಗ್ ಅವರನ್ನು ಇಟ್ಟುಕೊಂಡು, ಕೆಲವು ಸ್ನೇಹಿತರೊಂದಿಗೆ ರಾತ್ರೋರಾತ್ರಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ಹಿನ್ನಲೆ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಒಮ್ಮೆ ಕೇಳಿಸಿಕೊಳ್ಳಿ"

"ಸರ್ಕಾರದ ವಿರುದ್ಧ ತಮ್ಮ ಆರೋಪಗಳಿಗೆ ಪುರಾವೆ ನೀಡಿ. ಸರ್ಕಾರದಲ್ಲಿ ಸಚಿವನಾಗಿ ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡಿದರೆ ಅದಕ್ಕೆ ಪುರಾವೆ ಕೇಳುವುದು ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಹೇಗಾದೀತು" ಎಂದು ಸಚಿವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News