ಹಾಸನ: 8 ಸಾವಿರ ದಾಟಿದ ಕೊರೋನ ಪಾಸಿಟಿವ್; ಮೃತರ ಸಂಖ್ಯೆ 189

Update: 2020-08-31 18:03 GMT

ಹಾಸನ, ಆ.31: ಜಿಲ್ಲೆಯಲ್ಲಿ ದಿನೇ ದಿನೇ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸೋಮವಾರದಂದು 217 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿರುವುದಾಗಿ ಪ್ರಭಾರ ಆರೋಗ್ಯಾಧಿಕಾರಿ ಡಾ.ಕಾಂತರಾಜ್  ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಸೋಮವಾರ ಬಿಡುಗಡೆಯಾದ 138 ಜನರು ಸೇರಿ ಈವರೆಗೆ 5332 ಮಂದಿ ಗುಣಮುಖರಾಗಿದ್ದಾರೆ. 2504 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 60 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಸೋಂಕಿತರ ಸಂಖ್ಯೆ 8025ಕ್ಕೆ ಏರಿಕೆಯಾದರೆ, ಮೃತರ ಸಂಖ್ಯೆ 189ಕ್ಕೆ ತಲುಪಿದೆ ಎಂದರು. 

ಆಲೂರು-3, ಅರಕಲಗೂಡು-8, ಅರಸೀಕೆರೆ-18, ಬೇಲೂರು-13, ಚನ್ನರಾಯಪಟ್ಟಣ-26, ಹಾಸನ-124,  ಹೊಳೆನರಸೀಪುರ-20, ಸಕಲೇಶಪುರ-4, ಇತರೆ- 1 ಒಟ್ಟು 217 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ನೆಗಡಿ, ಕೆಮ್ಮು ಏನಾದರೂ ಇದ್ದರೆ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೋನ ಸೋಂಕು ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News