ಬಿಜೆಪಿ ಪಕ್ಷ ಸೇರಲು ಬಂದ ಗ್ಯಾಂಗ್ ಸ್ಟರ್ ಪೊಲೀಸರನ್ನು ನೋಡಿ ಓಡಿ ಹೋದ !

Update: 2020-09-01 11:07 GMT

ಚೆನ್ನೈ: ಬಿಜೆಪಿ ಸೇರಲು ಸಿದ್ಧನಾಗಿದ್ದ ಕುಖ್ಯಾತ ಗ್ಯಾಂಗ್ ಸ್ಟರ್ ರೆಡ್ ಹಿಲ್ಸ್ ಸೂರ್ಯ ಪೊಲೀಸರನ್ನು ಕಂಡ ತಕ್ಷಣ ಸ್ಥಳದಿಂದ ಕಾಲ್ಕಿತ್ತ ಕುತೂಹಲಕಾರಿ ವಿದ್ಯಮಾನ ವರದಿಯಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಸಮ್ಮುಖದಲ್ಲಿ ಸೂರ್ಯ ಪಕ್ಷ ಸೇರಲಿದ್ದ. ಆತನ ವಿರುದ್ಧ ಅರ್ಧ ಡಜನ್ ಕೊಲೆ ಪ್ರಕರಣಗಳ ಸಹಿತ 50ಕ್ಕೂ ಅಧಿಕ ಕೇಸ್‍ ಗಳಿವೆ.

ವಂಡಲೂರ್ ಸಮೀಪ ಆತನ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆಯುತ್ತಲೇ ಅವರು ಅಲ್ಲಿಗೆ ಧಾವಿಸಿದ್ದರು. ಅತ್ತ ಪೊಲೀಸರು ಕಣ್ಣಿಗೆ ಬೀಳುತ್ತಲೇ ಸೂರ್ಯ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ. ಆದರೆ ಅಲ್ಲಿ ಹಾಜರಿದ್ದ ಸೂರ್ಯನ ಕನಿಷ್ಠ ನಾಲ್ಕು ಮಂದಿ ಸಹಚರರನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಅವರ ವಾಹನಗಳಲ್ಲಿದ್ದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಬಂಧಿತರ ವಿರುದ್ಧ ಸೆಕ್ಷನ್ 41 ಅನ್ವಯ ಪ್ರಕರಣ ದಾಖಲಿಸಿದ ಪೊಲೀಸರು ನಂತರ ಅವರಿಗೆ ಎಚ್ಚರಿಕೆ ನೀಡಿ  ಬಿಡುಗಡೆಗೊಳಿಸಿದ್ದಾರೆ. ಆ ಕಾರ್ಯಕ್ರಮದ ವೀಡಿಯೋ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್, ಪಕ್ಷವನ್ನು ಸೇರುವವರೆಲ್ಲರ ಹಿನ್ನೆಲೆ ತಮಗೆ ತಿಳಿದಿರುವುದಿಲ್ಲ ಎಂದಿದ್ದಾರೆ. ತನ್ನ ಕುಟುಂಬದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಂಗವಾಗಿ ಈ  ಕಾರ್ಯಕ್ರಮವನ್ನು ಪಕ್ಷದ ಪದಾಧಿಕಾರಿಯೊಬ್ಬರು ಆಯೋಜಿಸಿದ್ದರೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News