ವೈರಸ್ ನಿಯಂತ್ರಣಕ್ಕೆ ಬಾರದೆ ಸಾಮಾನ್ಯ ಜೀವನಕ್ಕೆ ಮರಳುವುದು ವಿಪತ್ತಿಗೆ ಆಹ್ವಾನ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2020-09-01 14:29 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಸೆ. 1: ಕೊರೋನ ವೈರಸ್ ಸೋಂಕು ಗಮನಾರ್ಹ ಪ್ರಮಾಣದಲ್ಲಿ ಸಕ್ರಿಯವಾಗಿ ಹರಡುತ್ತಿರುವ ದೇಶಗಳು ಹರಡುವಿಕೆಯ ಗತಿಯನ್ನು ಕ್ಷಿಪ್ರಗೊಳಿಸುವಂತಹ ಕಾರ್ಯಕ್ರಮಗಳನ್ನು ತಡೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೋಮವಾರ ಹೇಳಿದೆ. ವೈರಸ್ ನಿಯಂತ್ರಣಕ್ಕೆ ಬಾರದೆ ಜನಜೀವನವನ್ನು ಯಥಾಸ್ಥಿತಿಗೆ ತರುವುದು ವಿಪತ್ತಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟಿಸಿ 8 ತಿಂಗಳ ಬಳಿಕವೂ, ನಿರ್ಬಂಧಗಳಲ್ಲೇ ಬದುಕುವುದರಿಂದ ಹೆಚ್ಚಿನ ಜನರು ಬೇಸತ್ತಿದ್ದಾರೆ ಹಾಗೂ ಸಾಮಾನ್ಯ ಜೀವನಕ್ಕೆ ಮರಳಲು ಬಯಸುತ್ತಿದ್ದಾರೆ ಎನ್ನುವುದು ಸತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.

ಆರ್ಥಿಕತೆಗಳನ್ನು ಮತ್ತು ಸಾಮಾಜಿಕ ಜೀವನಗಳನ್ನು ಮರುಆರಂಭಿಸುವ ಪ್ರಯತ್ನಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು. ‘‘ಮಕ್ಕಳು ಶಾಲೆಗಳಿಗೆ ಮರಳುವುದನ್ನು ಮತ್ತು ಜನರು ಕೆಲಸಗಳಿಗೆ ಮರಳುವುದನ್ನು ನೋಡಲು ನಾವು ಬಯಸಿದ್ದೇವೆ. ಆದರೆ, ಅವುಗಳನ್ನು ಸುರಕ್ಷಿತವಾಗಿ ಮಾಡಬೇಕೆಂದು ನಾವು ಬಯಸುತ್ತೇವೆ’’ ಎಂದರು.

‘‘ಸಾಂಕ್ರಾಮಿಕ ಮುಕ್ತಾಯಗೊಂಡಿದೆ ಎಂಬುದಾಗಿ ಯಾವುದೇ ದೇಶವೂ ನಟಿಸುವಂತಿಲ್ಲ. ಈ ವೈರಸ್ ಸುಲಭವಾಗಿ ಹರಡುತ್ತದೆ ಎನ್ನುವುದು ವಾಸ್ತವ. ನಿಯಂತ್ರಣವಿಲ್ಲದೆ ಸಾಮಾನ್ಯ ಜನಜೀವನಕ್ಕೆ ಮರಳುವುದು ವಿಪತ್ತಿಗೆ ಆಹ್ವಾನ ನೀಡಿದಂತೆ’’ ಎಂಬುದಾಗಿ ಗೇಬ್ರಿಯಸ್ ಎಚ್ಚರಿಸಿದರು.

ಲಸಿಕೆಗೆ ತುರ್ತು ಅನುಮೋದನೆ ನೀಡುವಾಗ ವಿವೇಚನೆ ಅಗತ್ಯ: ಡಬ್ಲ್ಯುಎಚ್‌ಒ ವಿಜ್ಞಾನಿ

ಕೋವಿಡ್-19 ಲಸಿಕೆಗಳಿಗೆ ತುರ್ತು ಅನುಮೋದನೆ ನೀಡುವಾಗ ‘ಅತ್ಯಂತ ಗಾಂಭೀರ್ಯ ಹಾಗೂ ವಿವೇಚನೆ’ಯಿಂದ ವರ್ತಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಸೋಮವಾರ ಹೇಳಿದ್ದಾರೆ.

ಕೊರೋನ ವೈರಸ್‌ನ ಸಂಭಾವ್ಯ ಲಸಿಕೆಯ ಪರೀಕ್ಷಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಬಗ್ಗೆ ಪರಿಶೀಲಿಸುವುದಾಗಿ ಅಮೆರಿಕ ಹೇಳಿದ ಬಳಿಕ ಸುದ್ದಿಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

ಸಂಪೂರ್ಣ ಪ್ರಯೋಗಗಳನ್ನು ಪೂರ್ಣಗೊಳಿಸದೆ ಔಷಧಗಳಿಗೆ ಅಂಗೀಕಾರ ನೀಡುವ ಹಕ್ಕು ಪ್ರತಿಯೊಂದು ದೇಶಕ್ಕೆ ಇರುವುದಾದರೂ, ‘‘ಅದನ್ನು ಯಾರೂ ವಿವೇಚನಾರಹಿತವಾಗಿ ಮಾಡುವಂತಿಲ್ಲ’’ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದರು.

ರಶ್ಯವು ಎರಡು ತಿಂಗಳಿಗೂ ಕಡಿಮೆ ಅವಧಿಯ ಮಾನವ ಪ್ರಯೋಗ ನಡೆಸಿದ ಬಳಿಕ ಈ ತಿಂಗಳ ಆದಿ ಭಾಗದಲ್ಲಿ ಕೊರೋನ ವೈರಸ್ ಲಸಿಕೆಗೆ ಅಂಗೀಕಾರ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News