ಜಿಎಸ್‌ಟಿ: ರಾಜ್ಯಗಳಿಗೆ ಅನ್ಯಾಯ

Update: 2020-09-02 05:10 GMT

ಕಳೆದ ವರ್ಷ ಕರ್ನಾಟಕವನ್ನು ತತ್ತರಿಸುವಂತೆ ಮಾಡಿದ ಪ್ರವಾಹ ಮತ್ತು ಆನಂತರ ಅಪ್ಪಳಿಸಿದ ಕೊರೋನ ಎಂಬ ವೈರಾಣು ಹಾವಳಿ, ಸರಕಾರದಿಂದ ಹೇರಲ್ಪಟ್ಟ ಅವೈಜ್ಞಾನಿಕ ಲಾಕ್‌ಡೌನ್ ಇದೆಲ್ಲದರ ಪರಿಣಾಮವಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಸಿತದ ಅಂಚಿಗೆ ಬಂದು ತಲುಪಿದೆ. ಇದೀಗ ಉರಿಯುವ ಗಾಯಕ್ಕೆ ಉಪ್ಪಿನ ಹುಡಿ ಎರಚಿದಂತೆ ಕೇಂದ್ರ ಸರಕಾರ ರಾಜ್ಯದ ಪಾಲಿನ ಜಿಎಸ್‌ಟಿ ತೆರಿಗೆ 13,764 ಕೋಟಿ ರೂ. ಬಾಕಿ ಉಳಿಸಿಕೊಂಡು ಈಗ ಕೈಯೆತ್ತಿರುವುದು ತುಂಬ ಕಳವಳಕಾರಿ ಸಂಗತಿಯಾಗಿದೆ.

ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳಿಗೆ ಕೇಂದ್ರ ಸರಕಾರ ಒಟ್ಟು 3 ಲಕ್ಷ ಕೋಟಿ ರೂ. ಜಿಎಸ್‌ಟಿ ಬಾಕಿ ಉಳಿಸಿಕೊಂಡಿದೆ. ಬಹುತೇಕ ಎಲ್ಲ ರಾಜ್ಯಗಳು ಕೂಡ ತೀವ್ರವಾದ ಆರ್ಥಿಕ ಮುಗ್ಗಟ್ಟಿನಲ್ಲಿವೆ. ಎಪ್ಪತ್ತೇಳು ದಿನಗಳ ಸುದೀರ್ಘ ಲಾಕ್‌ಡೌನ್ ಪರಿಣಾಮವಾಗಿ ವ್ಯಾಪಾರೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡು ರಾಜ್ಯಗಳ ಪರಿಸ್ಥಿತಿ ಹದಗೆಟ್ಟಿದೆ. ವಾಸ್ತವಾಂಶ ಹೀಗಿರುವಾಗ ಕೇಂದ್ರ ಸರಕಾರ ಇದೆಲ್ಲ ‘ದೇವರ ಆಟ’ ಎಂಬ ನೆಪ ಹೇಳಿ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಹೊರಟಿದೆ.

ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯನ್ನು ತರುವ ಉದ್ದೇಶದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎಂಬ ವ್ಯವಸ್ಥೆಯನ್ನು ರೂಪಿಸಲಾಯಿತು. ಇದಕ್ಕಾಗಿ ರಾಜ್ಯ ಸರಕಾರಗಳು ತಮ್ಮ ವ್ಯಾಪ್ತಿಯಲ್ಲಿ ಆ ವರೆಗೆ ಜಾರಿಯಲ್ಲಿದ್ದ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತಿತರ ಪರೋಕ್ಷ ತೆರಿಗೆಗಳನ್ನು ಜಿಎಸ್‌ಟಿಗಾಗಿ ಬಿಟ್ಟು ಕೊಟ್ಟವು. ಇದರಿಂದ ರಾಜ್ಯಗಳ ಸಂಪನ್ಮೂಲ ಸಂಗ್ರಹದ ಮೇಲೆ ದೊಡ್ಡ ಹೊಡೆತ ಬಿತ್ತು. ವರಮಾನ ಸಂಗ್ರಹವಾಗದೆ ರಾಜ್ಯಗಳು ತೀವ್ರ ನಷ್ಟಕ್ಕೊಳಗಾದವು. ಈ ನಷ್ಟವನ್ನು ಭರಿಸಿಕೊಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿತು. ಆದರೆ ಕೇಂದ್ರ ಸರಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಕೊರೋನ ಪರಿಣಾಮವಾಗಿ ದೇಶವ್ಯಾಪಿ ಲಾಕ್‌ಡೌನ್ ಹೇರಿದ್ದರಿಂದ ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತ ಉಂಟಾಗಿದೆ ಎಂದು ಕೇಂದ್ರ ಸರಕಾರ ಈಗ ಸಬೂಬು ಹೇಳುತ್ತಿದೆ. ರಾಜ್ಯಗಳ ಪಾಲಿನ ಹಣವನ್ನು ಕೊಡಲಾಗದ ಕೇಂದ್ರ ಸರಕಾರವು ರಾಜ್ಯಗಳು ಅನುಭವಿಸುತ್ತಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಸಾಲ ಪಡೆಯುವಂತೆ ಸೂಚನೆ ನೀಡಿದೆ.

ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಸರಕಾರ ಕೋವಿಡ್ ನೆಪ ಹೇಳುತ್ತಿರುವುದು ಸರಿಯಲ್ಲ. ವಾಸ್ತವವಾಗಿ ಈ ಕೋವಿಡ್ ವೈರಾಣು ವ್ಯಾಪಿಸುವುದಕ್ಕಿಂತ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ ಕುಸಿತದ ಹಂತವನ್ನು ತಲುಪಿತ್ತು. ತರಾತುರಿಯಲ್ಲಿ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಮಾಡಿದ ನೋಟು ಅಮಾನ್ಯದ ಪರಿಣಾಮವಾಗಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಲೇ ಬಂತು. ಬಿಕ್ಕಟ್ಟಿನ ಸುಳಿಯಿಂದ ಪಾರಾಗಲು ರಿಸರ್ವ್ ಬ್ಯಾಂಕ್‌ನ ವಿಶೇಷ ನಿಧಿಯನ್ನೂ ಬಳಸಿಕೊಳ್ಳಲಾಯಿತು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೊರೋನ ಬಂತು. ಆಗಲೂ ಸರಕಾರ ಅತ್ಯಂತ ಅವೈಜ್ಞಾನಿಕವಾಗಿ ದೇಶವ್ಯಾಪಿ ಲಾಕ್‌ಡೌನ್ ಮಾಡಿ ಭಾರೀ ಪ್ರಮಾಣದ ನಷ್ಟಕ್ಕೆ ಕಾರಣವಾಯಿತು. ಕೊರೋನ ಭಾರತಕ್ಕೆ ಮಾತ್ರ ಬಂದಿರಲಿಲ್ಲ. ಜಗತ್ತಿನ ಇತರ ದೇಶಗಳು ಕೂಡ ಅದರ ಹೊಡೆತಕ್ಕೆ ಸಿಕ್ಕಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಬೇರೆ ಯಾವ ದೇಶವೂ ಭಾರತದಷ್ಟು ಎಪ್ಪತ್ತೇಳು ದಿನಗಳ ಸುದೀರ್ಘವಾದ ಲಾಕ್‌ಡೌನ್ ಘೋಷಿಸಲಿಲ್ಲ. ವಾಸ್ತವವಾಗಿ ಈ ಅವೈಜ್ಞಾನಿಕ ಲಾಕ್‌ಡೌನ್ ಪರಿಣಾಮವಾಗಿ ಮೊದಲೇ ದುಸ್ಥಿತಿಯಲ್ಲಿದ್ದ ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು.

ಜಿಎಸ್‌ಟಿ ಪರಿಣಾಮವಾಗಿ ಉಂಟಾಗುವ ನಷ್ಟವನ್ನು ಭರ್ತಿ ಮಾಡುವ ಸಂಬಂಧ ಕೇಂದ್ರ ಮತ್ತು ರಾಜ್ಯಗಳ ನಡುವೆ ಒಂದು ಒಪ್ಪಂದವಾಗಿದೆ. ಈ ಒಪ್ಪಂದದ ಪ್ರಕಾರ ಕೇಂದ್ರ ಸರಕಾರ ರಾಜ್ಯಗಳಿಗೆ ಉಂಟಾಗಿರುವ ನಷ್ಟವನ್ನು ಭರ್ತಿ ಮಾಡಿಕೊಡಬೇಕು. ಆದರೆ ಅದೇ ಕೇಂದ್ರ ಸರಕಾರ ಈಗ ಒಪ್ಪಂದವನ್ನು ಮುರಿದು ಜಿಎಸ್‌ಟಿ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಸಾಲ ಪಡೆಯುವಂತೆ ರಾಜ್ಯಗಳಿಗೆ ಹೇಳುವುದು ಸರಿಯಲ್ಲ. ಇದರಿಂದ ರೋಸಿ ಹೋದ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳು ಕೇಂದ್ರ ಸರಕಾರವೇ ಸಾಲ ಮಾಡಿ ಜಿಎಸ್‌ಟಿ ಪರಿಹಾರದ ಮೊತ್ತವನ್ನು ಪಾವತಿ ಮಾಡಲಿ ಎಂದು ಹೇಳಿರುವುದು ಸೂಕ್ತವಾಗಿದೆ. ಭಾರತ ಎಂಬುದು ರಾಜ್ಯಗಳ ಒಕ್ಕೂಟ. ಒಕ್ಕೂಟ ತತ್ವದ ಪ್ರಕಾರ ಕೇಂದ್ರ ಮತ್ತು ರಾಜ್ಯಗಳ ನಡುವೆ ಆಗಿರುವ ಒಪ್ಪಂದಕ್ಕೆ ಸಾಂವಿಧಾನಿಕ ಅಡಿಪಾಯವಿದೆ. ಈ ಒಪ್ಪಂದವನ್ನು ಮುರಿಯುವುದು ಕೇಂದ್ರಕ್ಕೆ ಶೋಭೆ ತರುವುದಿಲ್ಲ.

ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಕಳೆದ ವರ್ಷದ ಪ್ರವಾಹ ಹಾಗೂ ಈಗಿನ ಲಾಕ್‌ಡೌನ್‌ನ ಪರಿಣಾಮವಾಗಿ ರಾಜ್ಯದ ಬಹುತೇಕ ಯೋಜನೆಗಳು ಹಣಕಾಸಿನ ಕೊರತೆಯಿಂದ ಸ್ಥಗಿತಗೊಂಡಿವೆ.ಖಾಲಿ ಇರುವ ಸರಕಾರಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿಲ್ಲ. ಸರಕಾರಿ ನೌಕರರ ಸಂಬಳ ಪಾವತಿ ಮಾಡಲೂ ಪರದಾಡಬೇಕಾಗಿದೆ. ಹೀಗಿರುವಾಗ ಕೇಂದ್ರ ಸರಕಾರ ರಾಜ್ಯಗಳ ಜಿಎಸ್‌ಟಿ ಪಾಲಿನ ಮೊತ್ತವನ್ನು ಕೊಡಲು ಸತಾಯಿಸುತ್ತಿರುವುದು ಖಂಡನೀಯವಾಗಿದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರವಿದ್ದರೆ ಆಡಳಿತ ಸುಗಮವಾಗಿ ನಡೆಯುತ್ತದೆ ಎಂದು ಬಿಜೆಪಿ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಈಗ ಬಹುತೇಕ ರಾಜ್ಯಗಳು ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರವಿದೆ. ಆದರೂ ಈ ಜಿಎಸ್‌ಟಿ ವಿವಾದವೇಕೆ? ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ಹೀಗೆ ಮಾಡುವುದರಿಂದ ಕ್ರಮೇಣ ಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳುತ್ತ ಹೋಗುತ್ತದೆ. ಅದಕ್ಕೆ ಕೇಂದ್ರ ಸರಕಾರ ಅವಕಾಶ ಮಾಡಿಕೊಡಬಾರದು. ಜಿಎಸ್‌ಟಿಗೆ ಸಂಬಂಧಿಸಿದಂತೆ ಕರ್ನಾಟಕದ ಬಾಕಿ 13,764 ಕೋಟಿ ರೂ. ಸೇರಿದಂತೆ ರಾಜ್ಯಗಳ ಬಾಕಿ ಮೂರು ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ತಕ್ಷಣ ಪಾವತಿ ಮಾಡುವ ಮೂಲಕ ವಚನ ಭ್ರಷ್ಟತೆಯ ಆರೋಪದಿಂದ ಮುಕ್ತಗೊಳ್ಳಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News