×
Ad

ಪಿಂಚಣಿಯಿಲ್ಲದೆ ಕಂಗಾಲಾದ ಲಕ್ಷಾಂತರ ಬಡ ಜನತೆ: ಜೀವನೋಪಾಯಕ್ಕೆ ಪರದಾಟ

Update: 2020-09-01 22:20 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.1: ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಜನರಿಗೆ ಕಳೆದ 5-6 ತಿಂಗಳಿನಿಂದ ಹಣ ಕೈ ಸೇರದಿರುವುದರಿಂದ ಕಂಗಾಲಾಗಿದ್ದು, ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ.

ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ, ಮನಸ್ವಿನಿ(ಅವಿವಾಹಿತ, ವಿಚ್ಚೇದಿತ), ಮೈತ್ರಿ(ಲೈಂಗಿಕ ಅಲ್ಪಸಂಖ್ಯಾತರು), ಸಂಧ್ಯಾ ಸುರಕ್ಷಾ, ಆ್ಯಸಿಡ್ ಸಂತ್ರಸ್ತರು, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು(ವಿಧವೆ), ಎಂಡೋಸಲ್ಫಾನ್ ಸಂತ್ರಸ್ತರು ಹೀಗೆ ಒಂಬತ್ತು ಪಿಂಚಣಿ ಯೋಜನೆಗಳಡಿ 65.92 ಲಕ್ಷ ಫಲಾನುಭವಿಗಳು 2020ರ ಜುಲೈ ತಿಂಗಳಲ್ಲಿ ಪಿಂಚಣಿ ಪಡೆದಿದ್ದಾರೆ. ಆದರೆ ಪಿಂಚಣಿದಾರರಿಗೆ ನೀಡಲು ಖಜಾನೆಯಲ್ಲಿ ಹಣವಿಲ್ಲ ಎಂದು ನೇರವಾಗಿ ಹೇಳುವ ಬದಲು, ಬ್ಯಾಂಕ್ ಖಾತೆ ಸರಿಯಿಲ್ಲ, ಸೂಕ್ತ ದಾಖಲೆಗಳು ಸಲ್ಲಿಸಿಲ್ಲ, ವಿಳಾಸ ಸರಿಯಿಲ್ಲ ಎಂಬ ಕಾರಣಗಳನ್ನು ನೀಡಿ ಅಂದಾಜು ಮೂರುವರೆ ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಕಳೆದ ಐದಾರು ತಿಂಗಳಿನಿಂದ ಪಿಂಚಣಿ ವಿತರಣೆಯಾಗಿಲ್ಲ. ಇದರಿಂದ ಅರ್ಹರು, ಬಡವರು ಪರದಾಡುವಂತಾಗಿದೆ.

ಪ್ರತಿ ತಿಂಗಳು 10 ರಂದು ಎಲ್ಲರಿಗೂ ಪಿಂಚಣಿ ಜಮೆಯಾಗುತ್ತದೆ. ಆದರೆ, ಈ ಬಾರಿ ವರ್ಷಾರಂಭದಲ್ಲಿ ತಂತ್ರಾಂಶ ಅಪ್‍ಡೇಟ್ ಸಮಸ್ಯೆಯಾಗಿತ್ತು, ಆ ಬಳಿಕ ಲಾಕ್‍ಡೌನ್ ಘೋಷಿಸಿದ್ದರಿಂದ ಅದು ಅಡಚಣೆಯನ್ನುಂಟು ಮಾಡಿತು ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸರಕಾರದ ಬೊಕ್ಕಸ ಖಾಲಿಯಾಗಿದ್ದು, ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಪಿಂಚಣಿ ನೀಡಲಾಗುತ್ತಿಲ್ಲ ಎಂಬ ಮಾಹಿತಿಯಿದೆ. ಆದರೆ, ಇದನ್ನು ನಿರ್ದೇಶನಾಲಯದ ನಿರ್ದೇಶಕ ಪ್ರಭು ನಿರಾಕರಿಸಿದ್ದು, ಪಿಂಚಣಿ ಹಂಚಿಕೆ ಅಗತ್ಯ ವಸ್ತುಗಳ ಸೇವೆಗಳ ಪಟ್ಟಿಯಲ್ಲಿದೆ. ಹೀಗಾಗಿ, ಆದ್ಯತಾನುಸಾರ ಹಣ ಬಿಡುಗಡೆಯಾಗುತ್ತಿದೆ. ಹಣ ಜಮಾವಣೆಗೆ ತಾಂತ್ರಿಕ ಕಾರಣಗಳಿಂದ ತೊಂದರೆಯಾಗಿರುವುದು ನಿಜ. ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

2020ರ ಜ. 1ರಿಂದ ಖಜಾನೆ-1ರ ಬದಲು ಖಜಾನೆ-2ರ ತಂತ್ರಾಂಶದ ಮೂಲಕ ಪಿಂಚಣಿ ಬಟವಾಡೆಯಾಗುತ್ತಿದೆ. ಆದರೆ, ಸೂಕ್ತ ದಾಖಲೆಗಳನ್ನು ನೀಡದ, ತಪ್ಪು ಅಂಚೆಪಟ್ಟಿಗೆ ಸಂಖ್ಯೆ, ಗ್ರಾಮದ ಹೆಸರು ನಮೂದಿಸಿದ ಫಲಾನುಭವಿಗಳಿಗೆ ಮಾಸಾಶನ ಹಂಚಿಕೆ ಸ್ಥಗಿತಗೊಂಡಿದೆ. ಅರ್ಹ ಪಿಂಚಣಿದಾರರರ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.

20.36 ಲಕ್ಷ ಜನರಿಗೆ ಮನಿ ಆರ್ಡರ್: ಹೊಸ ತಂತ್ರಾಂಶ ಮೂಲಕ 45.55 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಿಂಚಣಿ ಜಮೆ ಮಾಡಲಾಗುತ್ತಿದೆ. ಇನ್ನು 20.36 ಲಕ್ಷ ಜನರಿಗೆ ಎಲೆಕ್ಟ್ರಾನಿಕ್ ಮನಿ ಆರ್ಡರ್(ಇಎಂಒ) ಮೂಲಕ ತಲುಪಿಸಲಾಗುತ್ತಿದೆ. ಅನೇಕ ಹಳ್ಳಿಗಳಲ್ಲಿ ಈ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಕಾರಣಕ್ಕಾಗಿ ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ ಖಾತೆ ತೆರೆದು ವಿವರ ಸಲ್ಲಿಸುವಂತೆ ಫಲಾನುಭವಿಗಳಿಗೆ ಸೂಚಿಸಲಾಗಿದೆ ಎಂದು ಜಿ. ಪ್ರಭು ತಿಳಿಸಿದ್ದಾರೆ.

ಫೆಬ್ರವರಿಯಿಂದ ಪಿಂಚಣಿ ಬಂದಿಲ್ಲ

ಫೆಬ್ರವರಿಯಿಂದ ಪಿಂಚಣಿ ಬಂದಿಲ್ಲ. ತಹಶೀಲ್ದಾರ್ ಕಚೇರಿಯಲ್ಲಿ ಎರಡು ಬಾರಿ ದಾಖಲೆಗಳ ನಕಲು ನೀಡಿ ಬಂದರೂ ಪ್ರಯೋಜನವಾಗಿಲ್ಲ. ಹಣ ಬಂದಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ವಾರಕ್ಕೊಮ್ಮೆ ಆಟೊಗೆ ಹಣ ನೀಡಿ ಅಂಚೆ ಕಚೇರಿಗೆ ಹೋಗಿ ಬರುತ್ತಿದ್ದೇನೆ. ಅಲ್ಲಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಕೊನೆಗೆ ಸಿಬ್ಬಂದಿ ಪಾಸ್ ಬುಕ್ ಪರಿಶೀಲಿಸಿ ಹಣ ಬಂದಿಲ್ಲ ಎಂದು ಹೇಳುತ್ತಾರೆ. ಸಣ್ಣಪುಟ್ಟ ಖರ್ಚುಗಳಿಗೆ ಈ ಹಣವನ್ನೇ ನಂಬಿದ್ದೇನೆ.

-ಸುಶೀಲಮ್ಮ, ವಿಧವಾ ವೇತನ ಪಡೆಯುವ ಮಹಿಳೆ

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News