ಅರಿವು ವಿದ್ಯಾಭ್ಯಾಸ ಯೋಜನೆಯಲ್ಲಿ ಸೌಲಭ್ಯ ಕಡಿತ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡನೆ

Update: 2020-09-01 18:01 GMT

ಬೆಂಗಳೂರು, ಸೆ.1: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಪಡೆದು ವೃತ್ತಿಪರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸಾಲದ ಮೊತ್ತವನ್ನು ಈ ವರ್ಷ ಶೇ.50 ರಿಂದ 70ರಷ್ಟು ಕಡಿತಗೊಳಿಸಲಾಗಿದ್ದು ಸರಕಾರದ ಕ್ರಮವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿಗಮಕ್ಕೆ ಪ್ರಸಕ್ತ ಸಾಲಿನಲ್ಲಿ ಕೇವಲ 50 ಕೋಟಿ ರೂ.ಹಂಚಿಕೆ ಮಾಡಲಾಗಿದ್ದು, ನಿಗಮದ ವಿವಿಧ ಯೋಜನೆಗಳ ಜೊತೆಗೆ ಅರಿವು ವಿದ್ಯಾಭ್ಯಾಸ ಯೋಜನೆಗೂ ಇದೇ ಹಣವನ್ನು ಬಳಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಹೀಗಾಗಿ, ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ಮೂಲಕ ಸೀಟು ಪಡೆದು ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಳೆದ ವರ್ಷ ನೀಡಲಾದ ಸಾಲದ ಮೊತ್ತದ ಪೈಕಿ ಪ್ರಸಕ್ತ ವರ್ಷ ಶೇ.50ರಷ್ಟು ನೀಡಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಬರೆದಿರುವ ಪತ್ರ ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ಎಳೆದಿರುವ ಬರೆಯಾಗಿದೆ ಎಂದು ಅವರು ಕಿಡಿಗಾರಿದ್ದಾರೆ.

ನಿಗಮದಿಂದ ನೀಡಲಾಗುವ ಸಾಲ ಸೌಲಭ್ಯವನ್ನೇ ನಂಬಿಕೊಂಡು ಅಧ್ಯಯನ ಮುಂದುವರಿಸಿರುವ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೀಡಾಗಿದೆ. ಈಗ ಏಕಾಏಕಿ ಸಾಲದ ಮೊತ್ತ ಕಡಿತ ಮಾಡುವುದರಿಂದ ಉಳಿದ ಹಣ ಹೊಂದಿಸಲು ಬ್ಯಾಂಕುಗಳಿಂದ, ಖಾಸಗಿಯವರಿಂದ ಸಾಲ ಪಡೆಯ ಬೇಕಿದೆ ಎಂದು ಅವರು ಹೇಳಿದ್ದಾರೆ.

ಸಾಲ ಸಿಗದಿದ್ದರೆ ಅಧ್ಯಯನವನ್ನೇ ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಹಲವು ವಿದ್ಯಾರ್ಥಿಗಳು ಆತಂಕ ತೋಡಿಕೊಂಡಿದ್ದು, ಕೂಡಲೇ ಈ ನಿರ್ಧಾರವನ್ನು ಸರಕಾರ ಕೈಬಿಡಬೇಕು ಎಂದು ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News