ಪರಪ್ಪನ ಅಗ್ರಹಾರದಲ್ಲಿ ಕೊರೋನ ತಡೆಯಲು ಜೈಲು ಸಿಬ್ಬಂದಿ ಹರಸಾಹಸ

Update: 2020-09-01 18:11 GMT

ಬೆಂಗಳೂರು, ಸೆ.1: ರಾಜ್ಯದ ಪ್ರಮುಖ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಜೈಲು ಸಿಬ್ಬಂದಿ ಕೊರೋನ ತಡೆಯಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರಾಗೃಹದಲ್ಲಿ ಈಗಾಗಲೇ 4,900 ಕೈದಿಗಳಿದ್ದು, ಪ್ರತೀ ದಿನ ಈ ಸಂಖ್ಯೆ ಏರುತ್ತಲೇ ಇದೆ. ಇವರೆಲ್ಲರಿಗೂ ದಿನಂಪ್ರತಿ ಎರಡು ಬಾರಿ ತಪಾಸಣೆ ನಡೆಸಲು ಇರುವ ನಾಲ್ಕು ಮಂದಿ ವೈದ್ಯರು, 475 ಮಂದಿ ಸಿಬ್ಬಂದಿ ದಣಿಯುತ್ತಿದ್ದಾರೆ.

ಎಲ್ಲ ಬ್ಯಾರಕ್‍ಗಳಿಗೂ ಸ್ಯಾನಿಟೈಸರ್ ಸಿಂಪಡಣೆ, ಕೈಗವಸು, ಮಾಸ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೈದಿಗಳಿಗೆ ಬೆಳಗ್ಗೆ-ಸಂಜೆ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಗುತ್ತದೆ. ಈವರೆಗೆ 200 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದರಿಂದ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ. ಅದರಲ್ಲಿ 27 ಮಂದಿ ಗುಣಮುಖರಾದ ನಂತರ ಕ್ವಾರಂಟೈನ್ ಆಗಿ ಮತ್ತೆ ತಮ್ಮ ಬ್ಯಾರಕ್‍ಗಳಿಗೆ ತೆರಳಿದ್ದಾರೆ.

ಸುಪ್ರೀಂ ಆದೇಶದಂತೆ ಪೆರೋಲ್ ಮೇಲೆ ಕೈದಿಗಳನ್ನು ಕಳುಹಿಸುವಾಗ ವೈದ್ಯಕೀಯ ತಪಾಸಣೆಯಲ್ಲಿ ಆರೋಗ್ಯ ಸ್ಥಿರವಾಗಿದ್ದರೆ ಮಾತ್ರ ನಿಯಮಗಳನ್ನು ತಿಳಿಸಿ ಬಿಡಲಾಗಿತ್ತು. ಕೈದಿಗಳು ಕಾರಾಗೃಹಕ್ಕೆ ವಾಪಸ್ ಆಗುವಾಗ ಕೋವಿಡ್-19 ತಪಾಸಣೆಗೊಳಪಡಿಸಿ ಸೋಂಕಿನ ಫಲಿತಾಂಶ ನೆಗೆಟಿವ್ ಬಂದ ನಂತರ ಮಾತ್ರ ಸೇರಿಸಿಕೊಳ್ಳಲಾಗುತ್ತದೆ.

60 ಸೋಂಕಿತರನ್ನು ಇಡುವ ವಿಶಾಲವಾದ ಬ್ಯಾರಕ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಪ್ರಕರಣವಿರಲಿ ಜೈಲಿನಿಂದ ಯಾರೇ ಆರೋಪಿ/ಕೈದಿ ಬಂದರೂ 14 ದಿನ ಪ್ರತ್ಯೇಕ ಕಟ್ಟಡದಲ್ಲಿಟ್ಟು ನಂತರವಷ್ಟೇ ಜೈಲಿನೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News