ಆಟಿಕೆ ಉತ್ಪಾದನೆ ಕುರಿತ ಪ್ರಧಾನಿ ಹೇಳಿಕೆ ವಾಸ್ತವ ಮರೆ ಮಾಚುವ ಕೆಲಸ: ನಿಖಿಲ್ ಕುಮಾರಸ್ವಾಮಿ

Update: 2020-09-01 18:18 GMT

ಬೆಂಗಳೂರು, ಸೆ.1: ಕೊಪ್ಪಳದಲ್ಲಿ ಪ್ರಾರಂಭವಾಗಲಿರುವ ಆಟಿಕೆ ಉತ್ಪಾದನೆ ಕುರಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆ ವಾಸ್ತವವನ್ನು ಮರೆ ಮಾಚುವ ಕೆಲಸವಾಗಿದೆ ಎಂದು ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಥಳೀಯರಿಗೆ ಆದ್ಯತೆ ಯೋಜನೆಗೆ ಬಲ ನೀಡಲು ಭಾರತದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರನ್ನು ಕೊಪ್ಪಳದಲ್ಲಿ ಪ್ರಾರಂಭಿಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೊಂಡಿದ್ದಾರೆ. ಭಾರತವನ್ನು ಆಟಿಕೆ ಉತ್ಪಾದನೆಯ ಕೇಂದ್ರ ಬಿಂದುವನ್ನಾಗಿ ಮಾಡಲು ನೀಡಿದ್ದ ಕರೆಗೆ ಓಗೊಟ್ಟು ಮಾಡಿರುವ ಕೆಲಸವೆಂಬಂತೆ ಪ್ರಧಾನಿಗಳು ಇದನ್ನು ಹೇಳಿಕೊಂಡಿದ್ದಾರೆ. ಆದರೆ ನಿಖಿಲ್, ಇದು ವಾಸ್ತವವನ್ನು ಮರೆಮಾಚುವ ಕೆಲಸ ಎಂದು ಟೀಕಿಸಿದ್ದಾರೆ.

ವಾಸ್ತವವಾಗಿ 2018ರಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಕನಸಿನ ಕೂಸಾಗಿದ್ದ 'ಕಾಂಪೀಟ್ ವಿತ್ ಚೀನಾ' ಪರಿಕಲ್ಪನೆಯಡಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, 2019ರಲ್ಲಿ 2000 ಕೋಟಿ ರೂ ಅನುದಾನ ಒದಗಿಸಲು ನಿರ್ಧರಿಸಿದ್ದರು ಎಂದು ತಿಳಿಸಿದ್ದಾರೆ.

ಅಲ್ಲದೆ, ಕೊಪ್ಪಳ ಆಟಿಕೆ ತಯಾರಿಕಾ ಕ್ಲಸ್ಟರ್‍ನಲ್ಲಿ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗಕ್ಕಾಗಿ ಕೊಪ್ಪಳದ ಯುವ ಜನತೆ ಬೆಂಗಳೂರನ್ನು ಅವಲಂಬಿಸುವುದು ಕಡಿಮೆಯಾಗಲಿ, ಆ ಮೂಲಕ ತಮ್ಮ ಮಾತೃ ಜಿಲ್ಲೆಗಳಲ್ಲಿ ಯುವಕರಿಗೆ ಕೆಲಸ ಸಿಗುವಂತಾಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News