ಶಿಕ್ಷಣ ಸಚಿವರ ಭರವಸೆ ಹಿನ್ನೆಲೆ ಧರಣಿ ಸತ್ಯಾಗ್ರಹ ವಾಪಸ್: ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ

Update: 2020-09-02 12:57 GMT

ಬೆಂಗಳೂರು, ಸೆ.2: ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ನಾಳೆ(ಸೆ.3)ರಂದು ವಿಧಾನಸೌಧದ ಶಿಕ್ಷಣ ಸಚಿವರ ಕೊಠಡಿಯ ಮುಂಭಾಗ ನಡೆಸಲು ಉದ್ದೇಶಿಸಿದ್ದ ಧರಣಿ ಸತ್ಯಾಗ್ರಹ ಹಿಂಪಡೆಯಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಕ್ಷಕರ ಬೇಡಿಕೆಗಳ ಸಂಬಂಧ ವಿಧಾನಪರಿಷತ್ ಸದಸ್ಯರೊಂದಿಗೆ ಇಂದು(ಸೆ.2) ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಕರ ಭಡ್ತಿ, ಆರ್‍ಟಿಇ ಬಾಕಿ ಹಣ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ತುರ್ತಾಗಿ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಧರಣಿಯನ್ನು ಹಿಂಪಡೆದಿದ್ದೇವೆಂದು ತಿಳಿಸಿದರು. ಈ ವೇಳೆ ಪರಿಷತ್‍ನ ಸದಸ್ಯರಾದ ಬೋಜೇಗೌಡ, ರಮೇಶ್‍ಗೌಡ ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಅಧಿಕಾರಿಗಳು ಉಪಸ್ಥಿತರಿದ್ದರು.

ಬೇಡಿಕೆಗಳು: ಮೈಸೂರು ವಿಭಾಗದಲ್ಲಿ ಗ್ರೇಡ್-2ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಭಡ್ತಿ ನೀಡುವ ಸಂಬಂಧ ಸೆ.10ರೊಳಗೆ ಡಿಪಿಸಿ ಮಾಡಿ, ಸೆ.15ರೊಳಗೆ ಕೌನ್ಸಲಿಂಗ್ ಮಾಡಲು ನಿರ್ಣಯಿಸಲಾಗಿದೆ.

ಮೈಸೂರು ವಿಭಾಗದಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ನೇರ ನೇಮಕಾತಿಗೆ ಶೇ.25 ಹಾಗೂ ಬಡ್ತಿಗೆ 75 ಅನುಪಾತವನ್ನು ನೀಡುವಲ್ಲಿ ಆಗಿರುವ ಲೋಪವನ್ನು ಸರಿಪಡಿಸಲು ಪ್ರತಿ ಸಾಲಿನಲ್ಲೂ ಬಡ್ತಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿ, ವರ್ಗಾವಣೆ ಸಮಯದಲ್ಲಿ ಬಡ್ತಿ ಹುದ್ದೆಗೆ ವರ್ಗಾವಣೆ ಮಾಡುವಂತೆ ಮುಂದಿನ ದಿನಗಳಲ್ಲಿ ಸದರಿ ಲೋಪವನ್ನು ಸರಿಪಡಿಸಲು ಕ್ರಮ ವಹಿಸಲು ತೀರ್ಮಾನಿಸಲಾಗಿದೆ.

ಆರ್‍ಟಿಇ ಮೊದಲನೇ ಕಂತು ಪಡೆದುಕೊಂಡಿರುವ ಖಾಸಗಿ ಅನುದಾನ ರಹಿತ ಶಾಲೆಗಳು ತಮ್ಮ ಶಾಲೆಯ ಬೋಧಕ, ಬೋಧಕೇತರರಿಗೆ ಬಾಕಿ ಇರುವ ಶೇ.50ರಷ್ಟು ವೇತನವನ್ನು ಕೂಡಲೇ ಪಾವತಿಸಲು ಸೂಚಿಸಲಾಗಿದೆ. ಈ ಸಂಬಂಧ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸುವಂತೆ ತೀರ್ಮಾನಿಸಲಾಗಿದೆ. ಆರ್‍ಟಿಇ 2ನೇ ಕಂತಿನ ಬಾಕಿ 270 ಕೋಟಿ ರೂ.ಮೊತ್ತವನ್ನು ಆದಷ್ಟು ಬೇಗ ಬಿಡುಗಡೆಗೊಳುಸುವುದಾಗಿ ಭರವಸೆ ನೀಡಲಾಗಿದೆ. ಈ ಸಂಬಂಧ ಯಾವುದೇ ನಿಯಮಗಳನ್ನು ವಿಧಿಸದೆ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News