×
Ad

ದಲಿತ ಮುಖಂಡನ ಹತ್ಯೆ ಪ್ರಕರಣ: ಆರೋಪಿಯನ್ನು ಗಲ್ಲಿಗೇರಿಸಲು ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ

Update: 2020-09-02 19:20 IST

ಚಿಕ್ಕಮಗಳೂರು, ಸೆ.2: ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿರುವ ಪರಿಶಿಷ್ಟ ಜಾತಿಯ ಯುವ ಮುಖಂಡ ಅನಿಲ ಇಂಗಳಗಿ ಕೊಲೆ ಆರೋಪಿಯನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಬುಧವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಮುಖಂಡರ ನಿಯೋಗವು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಿಂದಗಿಯ ದೇವಸ್ಥಾನದ ಕಟ್ಟೆಯಲ್ಲಿ ತಮಗೆ ಸರಿಸಮನಾಗಿ ಕುಳಿತಿದ್ದ ಎಂಬ ಕಾರಣಕ್ಕಾಗಿ ಸವರ್ಣೀಯರು ಯುವ ಮುಖಂಡ ಅನಿಲ ಇಂಗಳಗಿ ಅವರನ್ನು ಹತ್ಯೆ ಮಾಡಿದ್ದಾರೆ. ಸದ್ಯ ಪೊಲೀಸರಿಂದ ಬಂದಿಸಲ್ಪಟ್ಟಿರುವ ಹತ್ಯೆಯ ಪ್ರಮುಖ ಆರೋಪಿಯನ್ನು ಗಲ್ಲಿಗೇರಿಸುವ ಮೂಲಕ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿ ತಪ್ಪು ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂಬ ಸಂದೇಶವನ್ನು ಸರಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಮನು ಅವರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ನೀಡಿದ ನೀಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಹೊನ್ನೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎನ್.ಸುರೇಶ್, ನಗರ ಪರಿಶಿಷ್ಟ ಘಟಕ ಅಧ್ಯಕ್ಷ ಎಚ್.ಎಸ್.ಜಗದೀಶ್, ಕಾರ್ಯದರ್ಶಿ ಶಾಂತಕುಮಾರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News